ಉಡುಪಿ: ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯಲ್ಲಿ ಪಂಚೆ ಕಟ್ಕೊಂಡು, ತಲೆಗೊಂದು ಮುಟ್ಟಾಲೆ ಇಟ್ಕೊಂಡು, ಕೆಸರು ಗದ್ದೆಗಿಳಿದು ನೇಜಿ ನಾಟಿ ಮಾಡಿದರು. ಜಡಿ ಮಳೆಯನ್ನೂ ಲೆಕ್ಕಿಸದೆ, ಅಭಿಮಾನಿಗಳು ಮೆಚ್ಚಿನ ನಟನನ್ನು ಕಣ್ತುಂಬಿಕೊಂಡರು.
ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತ ಬೇಸಾಯ ಮಾಡುವ ಕೇದಾರೋತ್ಥಾನ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕೃಷಿಕರಿಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ಹುಲಿ ಕುಣಿತದ ಹಾಡು, ಡೋಲ್ಲಿನ ಸಂಭ್ರಮವಿತ್ತು. ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದನ್ನು ನೆನಪಿಸಿಕೊಂಡ ಶೆಟ್ರು, ಮುಂದಿನ ದಿನಗಳಲ್ಲಿ ಇದರಿಂದ ಬೆಳೆದ ಕುಚ್ಚಿಗೆ ಅಕ್ಕಿಗೆ ರಾಯಭಾರಿ ಆಗಲೂ ಸಿದ್ಧ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರದ 2 ಸಾವಿರ ಎಕರೆ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಶಾಸಕ ರಘುಪತಿ ಭಟ್ ಅವರ ವಿಶೇಷ ಕಾರ್ಯಕ್ರಮವನ್ನು ರಕ್ಷಿತ್ ಶ್ಲಾಘಿಸಿದ್ದಾರೆ. ಇನ್ನು, ರಕ್ಷಿತ್ ಶೆಟ್ಟಿ ರೈತರೊಂದಿಗೆ ಬೆರೆತು ಸಂಭ್ರಮಿಸಿದ್ದು ಹುಟ್ಟೂರಿನ ಅಭಿಮಾನಿಗಳ ಅಭಿಮಾನ ಹೆಚ್ಚಿಸಿತು.