ತುಮಕೂರು: ಕೇವಲ ಕೊಳವೆ ಬಾವಿ ಕೊರೆಯುವುದಷ್ಟೇ ಆರ್ ಡಬ್ಲ್ಯೂ ಎಸ್ ಕೆಲಸವಲ್ಲ. ಕೊರೆದ ನಂತರ ಎಲ್ಲಾ ಕೆಲಸಗಳನ್ನು ಉಸ್ತುವಾರಿ ಮಾಡಿ, ಅಂತಿಮವಾಗಿ ಜನರಿಗೆ ಕುಡಿಯುವ ನೀರು ಒದಗಿಸುವವರರಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳ ಜೊತೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿಯ ಕಾರ್ಯದರ್ಶಿ ನರಸಿಂಹಮೂರ್ತಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ನಡೆಸಲಾಯಿತು. ಈ ವೇಳೆ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದು, ಅವುಗಳ ದುರಸ್ತಿ ಮಾಡಿದರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಇಲ್ಲವಾದರೆ ಅವುಗಳು ಇನ್ನಷ್ಟು ಹಾಳಾಗಿ ಮೂಲೆಗುಂಪಾಗುತ್ತವೆ ಎಂದು ಜಿಲ್ಲಾ ಪಂಚಾಯ್ತಿಯ ನ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ಅಧಿಕಾರಿಗಳಿಗೆ ತಿಳಿಸಿದರು.
ತುಮಕೂರು ಪಿಆರ್ಇಡಿಗೆ ಈ ವರ್ಷ ಮಧುಗಿರಿ ಉಪವಿಭಾಗದಲ್ಲಿ ಸುಮಾರು 80 ಲಕ್ಷ ರೂಪಾಯಿ ಹಾಗೂ ತುಮಕೂರು ಉಪವಿಭಾಗದಲ್ಲಿ 15 ಲಕ್ಷ ರೂಪಾಯಿ ಸೇರಿ ಒಟ್ಟು 95 ಲಕ್ಷ ರೂಗಳು ವಾಪಸ್ ಆಗಿವೆ. ಅನುದಾನವೇ ಇಲ್ಲ ಎಂದು ಪರದಾಡುತ್ತಿರುವ ಈ ಕಾಲದಲ್ಲಿ ಅನುದಾನ ವಾಪಸಾಗಲು ಅವಕಾಶ ಕೊಡಬೇಡಿ. ಸಾಧ್ಯವಾದಷ್ಟು ಬೇಗ ಬಿಲ್ಗಳನ್ನು ಸಲ್ಲಿಸಿ, ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಶಾರದಾ ನರಸಿಂಹಮೂರ್ತಿ ಸಲಹೆ ನೀಡಿದರು.