ತುಮಕೂರು: ತಿಪಟೂರಿನ ಗೋವಿಂದಯ್ಯ ಎಂಬುವರು 4 ಎಕರೆ ಜಮೀನಿಗೆ ಕೃಷಿ ಇಲಾಖೆಯಿಂದ ಹಾಗೂ ತೋಟಗಾರಿಕೆ ಇಲಾಖೆಯಿಂದ ಒಂದೇ ಸರ್ವೇ ನಂಬರ್ ಗೆ, ಒಂದೇ ತಿಂಗಳಿನಲ್ಲಿ 3 ಬಾರಿ ಸಾಲ ಪಡೆದುಕೊಂಡಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್.ಹುಚ್ಚಯ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ನ ಸದಸ್ಯ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಗೋವಿಂದಯ್ಯ ಎಂಬುವವರು ನಾಲ್ಕು ಎಕರೆ ಜಮೀನಿಗೆ ಕೃಷಿ ಇಲಾಖೆಯಿಂದ ಹಾಗೂ ತೋಟಗಾರಿಕೆ ಇಲಾಖೆಯಿಂದ ಒಂದೇ ಸರ್ವೆ ನಂಬರ್ ಗೆ ಒಂದೇ ತಿಂಗಳಿನಲ್ಲಿ ಮೂರು ಬಾರಿ ಸಾಲ ತೆಗೆದುಕೊಂಡಿರುತ್ತಾರೆ, ಸಾಮಾನ್ಯ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ, ಆದರೆ ಇಲ್ಲಿಯವರೆಗೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಇಂತಹ ಅಧಿಕಾರಿಗಳಿಗೆ ನಾಚಿಕೆಯಾಗಬೇಕು, ಇನ್ನು ಅನುಪಾಲನ ವರದಿಗೆ ಹಾರಿಕೆಯ ಉತ್ತರ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ವೈ.ಹೆಚ್ ಹುಚ್ಚಯ್ಯ ಪ್ರಶ್ನಿಸಿದರು.
ಜಿ.ಪಂ ಸದಸ್ಯಜಿ.ಪಂ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಸಾಮಾನ್ಯ ಸಭೆಯಾಗಿ ಆರು ತಿಂಗಳು ಕಳೆದಿದೆ. ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನೋಡುತ್ತೇನೆ, ಮಾಡುತ್ತೇನೆ, ಸದಸ್ಯರು ಗಮನಕ್ಕೆ ತಂದು ಪ್ರಾರಂಭಿಸುತ್ತೇನೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಸಭಾ ಮತಕ್ಕೆ ಯಾವುದಾದರೂ ಕಿಮ್ಮತ್ ಇದೆಯಾ? ಜಿ.ಪಂ ವ್ಯವಸ್ಥೆಗೆ ಯಾವುದಾದರೂ ಬೆಲೆ ಇದೆಯಾ ಎಂದು ಪ್ರಶ್ನಿಸಿದರು.
ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಜಿ.ಪಂ ಅಧ್ಯಕ್ಷೆ ಉಪಾಧ್ಯಕ್ಷೆ ಮತ್ತು ಸಿಇಓಗೆ ಕ್ರಮ ಕೈಗೊಳ್ಳುವ ಅಧಿಕಾರವಿದ್ದರೂ, ಕ್ರಮ ಜರುಗಿಸದೆ ಜಿ.ಪಂನಲ್ಲಿ ಇದ್ದುಕೊಂಡು ಏನು ಮಾಡುತ್ತಿದ್ದೀರಾ? ಸದಸ್ಯರನ್ನು ಕಡೆಗಣಿಸಿ ಸಭೆ ನಡೆಯುತ್ತಿರುವುದಕ್ಕೆ ಸಮಂಜಸವಾದ ಉತ್ತರ ನೀಡಿ ಎಂದು ಸದಸ್ಯೆ ಶಾಂತಲಾ ರಾಜಣ್ಣ ಆಗ್ರಹಿಸಿದರು.