ತುಮಕೂರು: 20 ವರ್ಷದಿಂದ ರಸ್ತೆ ಕಾಮಗಾರಿ ನಡೆಸಿಲ್ಲ ಎಂದು ನಡುರಸ್ತೆಯಲ್ಲೇ ಕುಳಿತು ಪಾಲಿಕೆ ಸದಸ್ಯರೊಬ್ಬರು ಪ್ರತಿಭಟನೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಸರಸ್ವತಿಪುರ ಬಡಾವಣೆಯಲ್ಲಿ ಕಳೆದ 20 ವರ್ಷದಿಂದ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕಾಗಿ ಪೂರಕ ರಸ್ತೆ ಕಾಮಗಾರಿ ಮಾಡಿಲ್ಲ ಎಂದು ಆರೋಪಿಸಿ ಸ್ವತಃ ಪಾಲಿಕೆ ಸದಸ್ಯ ಮಂಜುನಾಥ್ ಸೇರಿ ಇತರರು ಪ್ರತಿಭಟನೆ ನಡೆಸಿದ್ದಾರೆ. ಸದಸ್ಯ ಮಂಜುನಾಥ್ ತಮ್ಮ ಬೆಂಬಲಿಗರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಧರಣಿ ನಡೆಸಿದರು. ಸಾಕಷ್ಟು ಬಾರಿ ಸ್ಥಳೀಯ ಶಾಸಕರು, ಸಂಸದರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಾಕಷ್ಟ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ತಮ್ಮ ಜಾಗವನ್ನು ರಸ್ತೆ ಕಾಮಗಾರಿಗಾಗಿ ಬಿಟ್ಟುಕೊಡಲು ಆದೇಶವಿದ್ದರೂ ಅವರಿನ್ನೂ ಈ ಕಾರ್ಯ ಮಾಡಿಲ್ಲ. ಹೀಗಾಗಿ ರಸ್ತೆ ಕಾಮಗಾರಿ ವಿಳಂಬವಾಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉಪ ಮಹಾಪೌರರಾದ ನಾಜಿಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಹಾಗೂ ಪಾಲಿಕೆ ಪ್ರತಿಪಕ್ಷದ ನಾಯಕ ಕುಮಾರ್ ಪ್ರತಿಭಟನೆಗೆ ಸಾಥ್ ನೀಡಿದರು.
ಇದನ್ನೂ ಓದಿ: ಕುಂದಗೋಳದಿಂದ ಗುಡೇನಕಟ್ಟಿ ಗ್ರಾಮಕ್ಕೆ ಬಸ್ ವ್ಯವಸ್ಥೆ.. ಸಂತಸಗೊಂಡ ಗ್ರಾಮಸ್ಥರು..