ತುಮಕೂರು: ಒಬ್ಬ ಜನಪ್ರತಿನಿಧಿಯಾಗಿ ಮಾತನಾಡಬೇಕಾದರೆ ತೂಕವಾಗಿ ಮಾತಾಡಬೇಕು. ರಾಜಕೀಯವಾಗಿ ಯಾವ ಥರ ಬೇಕಾದರೂ ಮಾತಾಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಸಿಎಂ ಅನ್ನೋದನ್ನು ಬೇಕಾದರೆ ಬದಿಗಿಟ್ಟು ಮಾತಾಡೋಣ. ಮನುಷ್ಯ, ಮನುಷ್ಯನಿಗೆ ಬೆಲೆ ಕೊಡೋದನ್ನ ಮೊದಲು ಕಲಿಯಬೇಕು. ನಿನ್ನೆ ಅವರು ಮಾಧ್ಯಮಗಳಲ್ಲಿ ಮಾತನಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಸಂಸ್ಕೃತಿ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು. ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಸುಮಾರು ಏಳೆಂಟು ವರ್ಷಗಳಾಗಿದೆ ಎಂದು ನಿಖಿಲ್ ಸ್ಪಷ್ಟನೆ ಕೊಟ್ಟಿದ್ದಾರೆ.
ತುಮಕೂರು ತಾಲೂಕಿನ ಬಳಗೆರೆಯಲ್ಲಿ ಮಾತನಾಡಿದ ನಿಖಿಲ್, ಮೇಖ್ರಿ ಸರ್ಕಲ್ನಲ್ಲಿರುವ ಮನೆಯನ್ನು ಕುಮಾರಣ್ಣ ಗೆಸ್ಟ್ ಹೌಸ್ ತರ ಉಪಯೋಗಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೆ ಆ ಮನೆಯನ್ನ ಕ್ಲಿಯರ್ ಮಾಡಿಸಿಕೊಡಿ ಎಂದಿದ್ದರು. ಖಾಲಿ ಇದ್ದದರಿಂದ ನನ್ನ ಸುತ್ತಮುತ್ತ ಕೆಲಸ ಮಾಡುವ ಹುಡುಗರು ಅಲ್ಲಿ ವಾಸವಿದ್ದರು. ನನ್ನ ಕೆಲವೊಂದಷ್ಟು ಶೂಟಿಂಗ್ ಮೆಟಿರೀಯಲ್ಗಳು ಅಲ್ಲಿದ್ದವು. ಕೋವಿಡ್ ಇರುವ ಕಾರಣ ಎಲ್ಲಾ ಹುಡುಗರು ಬೀಗ ಹಾಕಿ ಊರಿಗೆ ಹೋಗಿದ್ದರು. ಬೀಗ ಒಡೆದು ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿರೋದನ್ನ ನಿನ್ನೆ ನೋಡಿದೆ. ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆ ಆಗಿದೆ. ದೊಡ್ಡಮಟ್ಟದ ರಂಪಾಟ ಏನು ಆಗಿಲ್ಲಾ ಎಂದು ಹೇಳಿದ್ದಾರೆ.
ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತನಾಡೋಕೆ ನಾನು ಇಷ್ಟಪಡಲ್ಲಾ. ಅವರ ವಸ್ತುವನ್ನು ಅವರು ವಾಪಸ್ ಕೇಳುತ್ತಿದ್ದಾರೆ. ತಪ್ಪೇನಿಲ್ಲಾ. ಈಗ ನಾವು ಅದನ್ನ ಖುಷಿ ಖುಷಿಯಾಗಿ ಕೊಡುತ್ತಿದ್ದೇವೆ. ಒಂದು ಟೈಂನಲ್ಲಿ ಅವರು ನಮ್ಮ ನಾಯಕರ ಜೊತೆ ಬಹಳ ಆತ್ಮೀಯವಾಗಿದ್ದರು. ರಾಜಕಾರಣದಲ್ಲಿ ಅವರು ಬೆಳೆಯೋದಕ್ಕೆ ನಮ್ಮ ನಾಯಕರದ್ದೂ ಕೊಡುಗೆ ಇದೆ. ನಾನಿನ್ನೂ ಹುಡುಗನೇ, ನನಗೇನು ವಯಸ್ಸಾಗಿಲ್ಲಾ, ನಾನು ಇನ್ನೂ ಚಿಕ್ಕಹುಡುಗನೇ. ನಾವು ಮಾತಾಡಬೇಕಾದರೆ ಸಮಾಜಕ್ಕೆ ಏನು ಸಂದೇಶ ಕೊಡುತ್ತೇವೆ ಅನ್ನೋದನ್ನು ಯೋಚನೆ ಮಾಡಬೇಕು. ಏಕವಚನದಲ್ಲಿ ಮಾತನಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದನ್ನು ಜಮೀರ್ ಯೋಚಿಸಬೇಕು ಎಂದು ನಿಖಿಲ್ ಕುಟುಕಿದ್ದಾರೆ.
ಓದಿ:ತಸ್ತೀಕ್ ಹಣ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ: ಕೋಟ ಸ್ಪಷ್ಟನೆ