ತುಮಕೂರು: ತ್ರಿವರ್ಣ ಧ್ವಜಕ್ಕಿಂತ ಮೇಲೆ ಎಬಿವಿಪಿ ಧ್ವಜ ಹಿಡಿದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮೆರವಣಿಗೆಯಲ್ಲಿ ಸಾಗಿದ್ದು ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಸಚಿವರ ಈ ನಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಪಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ತ್ರಿವರ್ಣಧ್ವಜ ಯಾತ್ರೆಗೆ ಸಾವಿರಾರು ಮಕ್ಕಳು ಪಾಲ್ಗೊಂಡಿದ್ದರು. 180 ಅಡಿ ಉದ್ದದ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರು ಪಾಲ್ಗೊಂಡಿದ್ದರು. ಈ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಮೇಲೆ ಎಬಿವಿಪಿ ಧ್ವಜವನ್ನು ಹಿಡಿದು ಸಚಿವ ನಾಗೇಶ್ ಮೆರವಣಿಗೆ ಎದುರು ಸಾಗಿದ್ದರು.
ಇದು ರಾಷ್ಟ್ರದ್ರೋಹಕ್ಕೆ ಸಮನಾದ ಅಪರಾಧವಾಗಿದೆ. ಶಾಲಾ ಮಕ್ಕಳನ್ನು ಇಂತಹ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದುರ್ದೈವದ ಸಂಗತಿ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ನಿಂದ ದೂರು ನೀಡಲಾಗಿದೆ ಎಂದು ಕಾಂಗ್ರೆಸಿಗರು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ವಿರೋಧ ವ್ಯಕ್ತವಾಗಿದೆ. ರಾಷ್ಟ್ರಧ್ವಜಕ್ಕಿಂತ ಮೇಲೆ ಎಬಿವಿಪಿ ಬಾವುಟ ಹಿಡಿದಿರುವುದು ತಪ್ಪು. ಶಿಕ್ಷಣ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಹೀಗೆ ಮಾಡಿದರೆ ಹೇಗೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಮಾತನಾಡಿ, ಶಿಕ್ಷಣ ಸಚಿವ ನಾಗೇಶ್ ಅವರು ನಿನ್ನೆ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ. ತ್ರಿವರ್ಣಧ್ವಜ ಜೊತೆಗೆ ಎಬಿವಿಪಿ ಧ್ವಜ ಕೂಡ ಹಾರಿಸಿದ್ದಾರೆ. ಕೋಮುವಾದ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಶಿಕ್ಷಣ ಸಚಿವರು ಯಾವ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಆರ್ಎಸ್ಎಸ್ ಚಡ್ಡಿ ಸುಟ್ಟಾಗ ಆ ಮಟ್ಟದಲ್ಲಿ ಅವರು ಕಿಡಿ ಕಾರಿದ್ದರು, ಇವತ್ತು ಇವರು ಮಾಡಿದ್ದೇನು?. ಇದು ಯಾವುದರ ಸಂಕೇತ? ಯಾವ ಸೂಚನೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ