ತುಮಕೂರು : ನಾನು ಯಾವುದೇ ಖಾತೆಗೆ ಬೇಡಿಕೆ ಇಟ್ಟವನಲ್ಲ. ಅವರು ಯಾವ ಖಾತೆಯಲ್ಲಿ ಕೆಲಸ ಮಾಡು ಎಂದು ನಿರೀಕ್ಷೆ ಮಾಡ್ತಾರೋ ಅದರಲ್ಲಿ ಕೆಲಸ ಮಾಡುತ್ತೇನೆ ಅಂದಿದ್ದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ಖಾತೆ ಕೊಟ್ಟಿದ್ದಾರೆ. ಈ ಹಿಂದೆ ಕಾನೂನು ಖಾತೆ ಕೊಟ್ಟು, ಕೊಟ್ಟವರೇ ವಾಪಸ್ ತೆಗೆದುಕೊಂಡಿದ್ದರು. ಅದಕ್ಕೆ ನಾನೇನು ಮಾಡಲಿ. ಹಿಂದೆ ಕಾನೂನು ಖಾತೆ ನನ್ನಿಂದ ವಾಪಸ್ ಪಡೆದು ಸಿಎಂ ಬೊಮ್ಮಾಯಿಗೆ ಕೊಟ್ಟಿದ್ರು ಎಂದರು.
ಈಗ ಅವರಿಗೆ ಎಲ್ಲಾ ಖಾತೆ ಮೇಲೂ ಗಮನಹರಿಸಲು ಸಾಧ್ಯವಾಗದೇ ಇರಬಹುದು. ಕಾನೂನು ಮತ್ತು ಸಂಸದೀಯ ಎರಡೂ ಒಟ್ಟಿಗೆ ಇರಲಿ ಎಂದು ನನಗೆ ಕೊಟ್ಟಿರಬಹುದು ಎಂದು ಹೇಳಿದರು. ಕಳೆದ ಬಾರಿ ಸಣ್ಣ ನೀರಾವರಿ ಖಾತೆ ಹಠ ಮಾಡಿ ಪಡೆದುಕೊಂಡಿದ್ದೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೆರೆಗಳನ್ನು ತುಂಬಿಸಬೇಕಿತ್ತು. ಈಗ ಆ ಕಾಮಗಾರಿ ಪೂರ್ಣ ಗೊಂಡಿದೆ ಎಂದರು. ಈಗಲೂ ಸಣ್ಣ ನೀರಾವರಿ ಖಾತೆ ಕೊಟ್ಟಿದ್ದಾರೆ. ಇದರಿಂದ ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಸಹಕಾರಿಯಾಗಲಿದೆ ಎಂದರು.