ತುಮಕೂರು: 'ಕೆರೆ ಕಳುವಾಗಿದೆ, ಹುಡುಕಿ ಕೊಡಿ' ಎಂಬ ವಿಚಿತ್ರ ದೂರೊಂದು ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಮಾಜಿಕ ಹೋರಾಟಗಾರರಿಂದ ದೂರು ನೀಡಲಾಗಿದ್ದು, ಪೊಲೀಸರು ಕೆರೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಬ್ಬಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮಾರನಕೆರೆ ಒತ್ತುವರಿಯಾಗಿದೆ. ಸರ್ವೇ ನಂಬರ್ 17ರಲ್ಲಿ 46 ಎಕರೆ 1 ಗುಂಟೆ ವ್ಯಾಪ್ತಿಯಲ್ಲಿ ಕೆರೆ ಅಸ್ಥಿತ್ವದಲ್ಲಿತ್ತು. ಆದರೆ ಕಾಲ ಕಳೆದಂತೆ ಇಡೀ ಕೆರೆ ಕಣ್ಮರೆಯಾಗಿದೆ. ಅಸಲಿಗೆ ಈ ಕೆರೆಯನ್ನು ಯಾರೋ ಪ್ರಭಾವಿ ರಾಜಕಾರಣಿಗಳು ಅಥವಾ ಸ್ಥಳೀಯರು ಒತ್ತುವರಿ ಮಾಡಿಕೊಂಡಿಲ್ಲ, ಬದಲಿಗೆ ಸರ್ಕಾರದ ಆಡಳಿತ ಯಂತ್ರವೇ ಈ ಕೆರೆಯನ್ನು ಒತ್ತುವರಿ ಮಾಡಿಕೊಂಡಿದೆ.
ಕೆರೆಯ ಜಾಗದಲ್ಲಿ ವರ್ಷಕ್ಕೊಂದರಂತೆ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. 1998ರಿಂದ 2021ವರೆಗೂ ಕೆರೆಯ ಜಾಗವನ್ನು ಸರ್ಕಾರಿ ಕಟ್ಟಡಗಳಿಗೆ ಸಂಘ-ಸಂಸ್ಥೆಗಳಿಗೆ ಜಾತಿವಾರು ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ.
1998ರಲ್ಲಿ ಒಕ್ಕಲಿಗ ಸಮುದಾಯ, ವೀರ ಶೈವ ಸಮುದಾಯ, ಸಾರ್ವಜನಿಕ ಶಿಕ್ಷಣ ಇಲಾಖೆಗೆ 2 ಎಕರೆ ನೀಡಲಾಗಿದೆ. 1998ರಲ್ಲಿ ಯಾದವ ಸಮುದಾಯಕ್ಕೆ 20 ಗುಂಟೆ, ಸರ್ಕಾರಿ ನೌಕರರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಸ್ಸಿ ಎಸ್ಟಿ ಹಾಸ್ಟೆಲ್, ಹೇಮಾವತಿ ಇಲಾಖೆ ಹೀಗೆ ಕೆರೆಯನ್ನು ಇಲಾಖೆವಾರು ಹಂಚಿಕೆ ಮಾಡಲಾಗಿದೆ.
ಇಡೀ ಗುಬ್ಬಿ ಪಟ್ಟಣಕ್ಕೆ ಮಾರನಕೆರೆ ಒಂದೇ ನೀರಿನ ಆಧಾರವಾಗಿದೆ. ಗುಬ್ಬಿ ಪಟ್ಟಣದಲ್ಲಿ ಬಿದ್ದ ಮಳೆ ನೀರು ಈ ಕೆರೆಗೆ ತುಂಬಿಕೊಳ್ಳುತ್ತಿತ್ತು. ಆದರೆ ಈಗ ಮಳೆ ಬಂದರೆ ಗುಬ್ಬಿ ಪಟ್ಟಣದ ನೀರು ಇದೇ ಜಾಗದಲ್ಲಿ ಬಂದು ನಿಲ್ಲುತ್ತಿದೆ. ಸರ್ಕಾರಿ ಕಟ್ಟಡಗಳು ನೀರಿನಲ್ಲಿ ಮುಳುಗುತ್ತಿವೆ. ಆದ್ದರಿಂದ ಕೆರೆ ಉಳಿಸಿಕೊಡಬೇಕೆಂದು ಕಳೆದ ಮೂರು ವರ್ಷಗಳಿಂದ ಸ್ಥಳೀಯರು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ?
ಕೆರೆ-ಕುಂಟೆಗಳು ನೀರಿನ ಮೂಲಗಳಾಗಿದ್ದು ಅನ್ಯ ಉದ್ದೇಶಕ್ಕಾಗಿ ಅದರ ಜಾಗವನ್ನು ಬಳಸದಂತೆ ಆ ಜಾಗವನ್ನು ಸಂರಕ್ಷಿಸುವಂತೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಆದೇಶವಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸರ್ಕಾರ ಈ ಕೆರೆ ಉಳಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದೀಗ ಇಡೀ ಕೆರೆ ಜಾಗವನ್ನು ಸರ್ವೇ ಮಾಡಲು ತಾಲ್ಲೂಕು ಆಡಳಿತ ಮುಂದಾಗಿದೆ.