ತುಮಕೂರು: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇರುವ ಕಡೆ ಶೇ.50 ರಷ್ಟು ಕೈಗಾರಿಕಾ ಆಕ್ಸಿಜನ್‌ಗಳನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ತುಮಕೂರಿನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲ್ಯಾಬೊರೇಟರಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಿಗೆ ಗುಜರಾತ್ ಮತ್ತು ಹೈದರಾಬಾದ್ ಮೂಲದ ಕೈಗಾರಿಕೆಗಳಿಂದ ಆಕ್ಸಿಜನ್ ತರಿಸಿಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 4,00,000 ಕೊರೊನಾ ಸೋಂಕಿತರ ಈಗಾಗಲೇ ಗುಣಮುಖರಾಗಿದ್ದಾರೆ. ಇನ್ನೂ ಒಂದು ಲಕ್ಷ ಸೋಂಕಿತರು ಇದ್ದಾರೆ. ರಾಜ್ಯದಲ್ಲಿ ಕೇವಲ 1.56 ರಷ್ಟು ಸಾವಿನ ಪ್ರಮಾಣವಿದೆ. ಹೀಗಾಗಿ ಸೋಂಕು ಹರಡುವಿಕೆ ದೃಷ್ಟಿಯಿಂದ ಸರ್ಕಾರ ಯಾವುದೇ ರೀತಿಯಲ್ಲೂ ವಿಫಲವಾಗಿಲ್ಲ ಎಂದು ತಿಳಿಸಿದರು.
ಕೋವಿಡ್ 19ಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಮಾಡಲಾಗಿದೆ. ಲೋಪಗಳು ಕಂಡು ಬಂದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರದ ನಿಯಮಾವಳಿಗಳು ಪಾಲನೆಯಾಗುತ್ತಿದೆ. ಈ ನಡುವೆ ಸೋಂಕಿತರು ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರೆ, ಅಂತಹವರು ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸಿರಬಹುದು. ಅದಕ್ಕೂ ನಾವು ದರವನ್ನು ನಿಗದಿ ಪಡಿಸಿದ್ದೇವೆ ಎಂದರು.
ಎಲ್ಲಾ ಆಸ್ಪತ್ರೆಗಳು ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ. ಅಲ್ಲದೇ ಈ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದಲೂ ಕೆಲಸ ಮಾಡಬೇಕು ಎಂದರು. ಸಚಿವ ಸ್ಥಾನ ಆಕಾಂಕ್ಷಿಗಳು ತಮಗೆ ಸಚಿವ ಪದವಿ ಬೇಕು ಎಂಬುದು ಯಾವುದೇ ರೀತಿಯ ಅಪರಾಧವಲ್ಲ ಎಂದು ಇದೇ ಸಂದರ್ಭ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.