ತುಮಕೂರು: ಲಾರಿ ಮಾಲೀಕರುಗಳಿಗೆ ಖಾಸಗಿ ಹಣಕಾಸು ಸಂಸ್ಥೆಗಳು ಕಿರುಕುಳ ಹಾಗೂ ದೌರ್ಜನ್ಯ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಲಾರಿ ಮಾಲೀಕರ ಸಂಘ ಆರೋಪಿಸಿದೆ. ತಮ್ಮ ಸಮಸ್ಯೆಗೆ ಸ್ಪಂದಿಸದ್ದಕ್ಕೆ ಬೇಸತ್ತು ದಯಾಮರಣ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಶ್ರೀನಿವಾಸರಾವ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಫೈನಾನ್ಸ್ ಸಂಸ್ಥೆಯವರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಅಥವಾ ಎರಡನೇ ಕಂತಿನ ಹಣವನ್ನು ಕಟ್ಟಲಾಗದ ಸಮಯದಲ್ಲಿ ಫೈನಾನ್ಸ್ ಕಂಪನಿಯವರು ಯಾವುದೇ ರೀತಿಯ ಸೂಚನೆಗಳನ್ನೂ ನೀಡದೆ ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಲಾರಿ ಚಾಲಕರ ಮನೆ ಮುಂದೆ ಬಂದು ತೊಂದರೆ ನೀಡುತಿದ್ದಾರೆ. ಹೀಗಾಗಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕೆಲ ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಯಿಂದ ಲಾರಿಗಳ ಸಂಚಾರ ಸರಕು-ಸಾಗಾಣಿಕೆಯಲ್ಲಿ ಇಳಿಮುಖವಾಗಿದೆ. ಇನ್ನು ಈ ಬಗ್ಗೆ ಅಕ್ಟೋಬರ್ 17ರಂದು ಜಿಲ್ಲಾಧಿಕಾರಿಗಳಿಗೆ ಲಾರಿ ಮಾಲೀಕರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದ್ರೆ, ಜಿಲ್ಲಾಧಿಕಾರಿ ಇಲ್ಲಿಯವರೆಗೆ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇದು ಹೀಗೆ ಮುಡುವರಿದರೆ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.