ತುಮಕೂರು: ಹರಿಜನ ಗಿರಿಜನ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗೆ ಸರ್ಕಾರ ವರ್ಗಾಯಿಸಿದ್ದು, ಆ ಹಣವನ್ನು ಹಿಂಪಡೆಯುವ ಮೂಲಕ ನಮ್ಮ ಅಭಿವೃದ್ಧಿ ಬಯಸುವ ಸಮಿತಿ ಹಾಗೂ ನಿಗಮ ಮಂಡಳಿಗಳಿಗೆ ನೀಡಬೇಕು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಜನ ಗಿರಿಜನ ಅವರ ಅಭಿವೃದ್ಧಿಗಾಗಿ 2019 -20 ನೇ ಸಾಲಿನಲ್ಲಿ ಮೀಸಲಿಟ್ಟ 30,445 ಕೋಟಿ ಹಣವನ್ನು, ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಗೆ ಖರ್ಚು ಮಾಡದೇ, ಉಳಿದಿದ್ದಂತಹ 19,000 ಕೋಟಿ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಹೇಳಿಕೆಯನ್ನು ನಮ್ಮ ಸಮುದಾಯ ಹಾಗೂ ಸಮಿತಿಯು ಖಂಡಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಆ ಹಣವನ್ನು ಹಿಂಪಡೆಯುವ ಮೂಲಕ ನಮ್ಮ ಅಭಿವೃದ್ಧಿ ಬಯಸುವ ಅನೇಕ ಸಮಿತಿಗಳು, ನಿಗಮ ಮಂಡಳಿಗಳಿಗೆ ನೀಡಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.