ತುಮಕೂರು: ತುಮಕೂರು ನಗರದಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ತಂಗಿರುವ ಐವರು ಗರ್ಭಿಣಿಯರಿಗೆ ಜಿಲ್ಲಾಡಳಿತ ವತಿಯಿಂದ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಾದಗಿರಿ ಮೂಲದ ಲಕ್ಷ್ಮಿ, ರಾಯಚೂರಿನ ಗೋವಿಂದಮ್ಮ, ಕಲಬುರಗಿಯ ಮೇಬೂಬಿ, ಕಲಬುರಗಿಯ ಲಕ್ಷ್ಮಿ, ಯಾದಗಿರಿಯ ಸಾಬಮ್ಮ ಅವರಿಗೆ ಸೀಮಂತ ಮಾಡಲಾಯಿತು. ಮಹಿಳಾ ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಮಹಿಳಾ ಸಿಬ್ಬಂದಿ ಐವರು ಗರ್ಭಿಣಿಯರಿಗೆ ಶಾಸ್ತ್ರೋಕ್ತವಾಗಿ ಹೂವಿನ ಹಾರಹಾಕಿ, ಮಡಿಲು ತುಂಬಿ, ಆರತಿ ಬೆಳಗಿದರು.
ಗರ್ಭಿಣಿಯರನ್ನು ಸಾಮಾಜಿಕ ಅಂತರದಲ್ಲಿ ಕೂರಿಸಲಾಗಿತ್ತು. ಅಲ್ಲದೆ ಎಲ್ಲರೂ ಮಾಸ್ಕ್ ಹಾಕಿಕೊಂಡಿದ್ದು ಗಮನಾರ್ಹವಾಗಿತ್ತು. ನಗರದ ಕೋತಿತೋಪು ರಸ್ತೆಯಲ್ಲಿರುವ ಎರಡು ನಿರಾಶ್ರಿತರ ಕೇಂದ್ರದಲ್ಲಿ 316 ಜನರು ತಂಗಿದ್ದಾರೆ. ಈ ಪೈಕಿ 108 ಮಹಿಳೆಯರು, 24 ಮಕ್ಕಳು, ಹಾಗೂ ಪುರುಷರು ಸೇರಿದ್ದಾರೆ. ಅವರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್, ನರಸಿಂಹರಾಜು, ಪೊಲೀಸ್ ಸಿಬ್ಬಂದಿ ಮತ್ತಿತರರು ಹಾಜರಿದ್ದರು.