ತುಮಕೂರು: ಜಿಲ್ಲೆಯಲ್ಲಿ ಈ ಬಾರಿ ಭರ್ಜರಿ ಮಳೆಯಾಗಿದ್ದು ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಲು ಜನಪ್ರತಿನಿಧಿಗಳು ಪೈಪೋಟಿ ಮೇರೆಗೆ ಆಗಮಿಸುತ್ತಿದ್ದಾರೆ.
ಕೊರಟಗೆರೆ ವ್ಯಾಪ್ತಿಯ ಗಟ್ಲಹಳ್ಳಿ ಕೆರೆ, ತುಂಬಾಡಿ ಕೆರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಬೃಹತ ಕೆರೆಗಳು ಕೋಡಿ ಬಿದ್ದಿವೆ. ಹೀಗಾಗಿ ಕೆರೆಗಳ ಬಳಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲು ಸ್ಥಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತು ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ ನಾ ಮುಂದು ತಾ ಮುಂದು ಎಂದು ಆಗಮಿಸುತ್ತಿದ್ದಾರೆ.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಪಿ.ಆರ್.ಸುಧಾಕರ್ ಲಾಲ್ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಕ್ಷೇತ್ರದ ಕೋರ ಹೋಬಳಿ, ಕೋಳಾಲಾ ಹೋಬಳಿ, ಸಿ.ಎನ್ ದುರ್ಗ ಹೋಬಳಿ, ಪುರವಾರ ಹೋಬಳಿ, ಹೊಳವನಹಳ್ಳಿ ಹೋಬಳಿ, ಕಸಬ ಹೋಬಳಿಗಳ ಹಲವಾರು ಗ್ರಾಮಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಹಳ್ಳಗಳಿಗೆ ಮತ್ತು ದೇವರಾಯನದುರ್ಗದಲ್ಲಿ ಉಗಮವಾಗಿ ಹರಿಯುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಸರಿ ಸುಮಾರು 25 ಕ್ಕೂ ಹೆಚ್ಚು ತಡೆಗೋಡೆ (ಚೆಕ್ ಡ್ಯಾಮ್)ಗಳನ್ನು ಅಂದು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ವರುಣನ ಕೃಪೆಯಿಂದ ಎಲ್ಲ ಡ್ಯಾಮ್ಗಳು ನೀರು ತುಂಬಿ ಹರಿಯುತ್ತಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಇನ್ನು, ಡಾ.ಜಿ.ಪರಮೇಶ್ವರ್ ಪ್ರಸ್ತುತ ಶಾಸಕರಾದ ನಂತರ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಮಳೆಯಾಗಿದೆ. ಇದೇ ಮೊದಲ ಬಾರಿಗೆ ಎಂಬಂತೆ ಬಹುತೇಕ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಇದು ಕ್ಷೇತ್ರದ ಜನರ ಅದೃಷ್ಟ ಎಂಬುದು ಪರಮೇಶ್ವರ್ ಅವರ ಬೆಂಬಲಿಗರ ವಾದ.
ಪರಮೇಶ್ವರ್ ಕೂಡ ಕೇವಲ ಗ್ರಾಮೀಣ ಪ್ರದೇಶವಲ್ಲದೇ ನಗರ ಪ್ರದೇಶದಲ್ಲಿರುವ ಸಾಮಾನ್ಯ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೊರಟಗೆರೆ ನಗರದ ಸರ್ಕಲ್‌ನಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಅಂಗಡಿಗಳಿಗೆ ಭೇಟಿ ನೀಡಿ ಅವರನ್ನು ಮಾತನಾಡಿಸಿದ್ದಾರೆ. ಅಲ್ಲದೆ ಅಕಾಲಿಕ ಮರಣ ಹೊಂದಿದ ನಟ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿ, ಯುವ ಸಮೂಹದೊಂದಿಗೆ ಬೆರೆಯುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ವಿಶ್ವಾಸ ಉಳಿಸಿಕೊಳ್ಳಲು ಈ ರೀತಿಯ ಕಾರ್ಯಗಳನ್ನು ಮಾಡುವ ಮೂಲಕ ಈ ರಾಜಕೀಯ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.