ತುಮಕೂರು: ರಾಜ್ಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, ಹಾಸನದ ಬಳಿಕ ಅತೀ ಹೆಚ್ಚು ಗಮನಸೆಳೆದ ಮತ್ತೊಂದು ಕ್ಷೇತ್ರ ತುಮಕೂರು. ಈ ಬಾರಿ ಇಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸ್ಪರ್ಧೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಹಾಸನ ಬಿಟ್ಟು ಹೊರಬಂದ ದೊಡ್ಡಗೌಡರು, ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಬಾರಿ ಸೋಲು ಕಂಡಿದ್ದ ಜಿಎಸ್ ಬಸವರಾಜ್, ದೇವೇಗೌಡರಿಗೆ ಪೈಪೋಟಿ ನೀಡಲು ಸಿದ್ಧರಾಗಿದ್ದಾರೆ.
ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡರ ರಾಜಕೀಯ ಹಿನ್ನೆಲೆ:
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಆಯ್ಕೆ
ಲೋಕಸಭೆ ಸದಸ್ಯರಾಗಿ 6 ಸಲ ಆಯ್ಕೆ
ತುಮಕೂರು ಲೋಕಸಭೆ ಕ್ಷೇತ್ರದಿಂದ ಆಯ್ಕೆ ಬಯಸಿ 7 ನೇ ಬಾರಿ ಸ್ಪರ್ಧೆ
1994-96ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು
ಜನವರಿ 1996 ಏಪ್ರಿಲ್1997ರವರೆಗೆ ಪ್ರಧಾನಿಯಾಗಿದ್ದ ದೇವೇಗೌಡರು
ಮೊದಲ ಬಾರಿಗೆ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧೆ
ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಅವರ ರಾಜಕೀಯ ಹಿನ್ನೆಲೆ:
ತುಮಕೂರು ಲೋಕಸಭೆ ಕ್ಷೇತ್ರದಿಂದ 4 ಬಾರಿ ಸಂಸದರಾಗಿ ಆಯ್ಕೆ
1984,1989,1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಆಯ್ಕೆ
2009ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ
1991, 2004, 2014ರಲ್ಲಿ ಸ್ಪರ್ಧಿಸಿ ಸೋಲು
ಪುತ್ರ ಜ್ಯೋತಿ ಗಣೇಶ್ ಪ್ರಸ್ತುತ ತುಮಕೂರು ವಿಧಾನಸಭಾ ಕ್ಷೇತ್ರದ ಶಾಸಕ.
ಕ್ಷೇತ್ರದಿಂದ ಆಯ್ಕೆ ಬಯಸಿ ಈ ಬಾರಿ 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಬಿಜೆಪಿ ಸೇರಿದಂತೆ, ಸಿಪಿಐ, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಕ್ಷ, ಅಂಬೇಡ್ಕರ್ ಸಮಾಜ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಅಭ್ಯರ್ಥಿಗಳೂ ಸೇರಿದಂತೆ 9 ಮಂದಿ ಪಕ್ಷೇತರರು ಅಖಾಡದಲ್ಲಿದ್ದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕ್ಷೇತ್ರದಲ್ಲಿರುವ ಮತದಾರರು, ಮತಗಟ್ಟೆ ವಿವರ:
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 16,08,000 ಮತದಾರರು ಇದ್ದಾರೆ. ಇವರಲ್ಲಿ ಪುರುಷ ಮತದಾರರು- 8,03,006, ಮಹಿಳಾ ಮತದಾರರು -8,04,874 ಮತ್ತು 120 ಮಂದಿ ಇತರರು ಚುನಾವಣೆಯಲ್ಲಿ ಮತ ಹಾಕಲಿದ್ದಾರೆ. ಕ್ಷೇತ್ರದಾದ್ಯಂತ 1,907 ಮತಗಟ್ಟೆ ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಹೆಚ್ಚು 262 ಮತಗಟ್ಟೆಗಳಿವೆ. ಜಿಲ್ಲೆಯಾದ್ಯಂತ 536 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಇಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬಿಗಿ ಭದ್ರತೆ, ಖಾಕಿ ಸರ್ಪಗಾವಲು:
ಚುನಾವಣೆಯಲ್ಲಿ 4,100 ಮಂದಿ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಜಿಲ್ಲೆಯಾದ್ಯಂತ ನಿಯೋಜನೆ ಮಾಡಲಾಗಿದೆ. ಇನ್ನುಳಿದಂತೆ ನಾಲ್ಕು ರಾಜ್ಯ ಸಶಸ್ತ್ರ ಮೀಸಲು ತಂಡಗಳು ಈಗಾಗಲೇ ಜಿಲ್ಲೆಗೆ ಬಂದಿದ್ದು ಮಧುಗಿರಿ, ತುರುವೇಕೆರೆ ಹಾಗೂ ತಿಪಟೂರು ತಾಲೂಕು ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿವೆ.ಇದರ ಹೊರತಾಗಿ ಜಿಲ್ಲೆಯಾದ್ಯಂತ 13 ಕೆಎಸ್‌ಆರ್‌ಪಿ ಪೊಲೀಸ್ ತುಕಡಿಗಳನ್ನು ಹೆಚ್ಚಿನ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಮತಯಂತ್ರಗಳನ್ನಿಡುವ ಸ್ಟ್ರಾಂಗ್ ರೂಂಗಳಲ್ಲಿ ಹೆಚ್ಚುವರಿ ಪೊಲೀಸರು ಕೂಡ ಕರ್ತವ್ಯ ನಿರ್ವಹಿಸಲಿದ್ದಾರೆ.