ತುಮಕೂರು: ಇಡೀ ನಾಡಿನ ಜನತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರಬೇಕೆಂದು ಬಯಸುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಪದೇ ಪದೆ ಬದಲಾವಣೆಯ ಕುರಿತು ಚಿಂತನೆ ನಡೆಸಿದರೆ ಆಡಳಿತ ಯಂತ್ರ ಕುಸಿಯುತ್ತದೆ. ಅಲ್ಲದೆ ರಾಜ್ಯದ ಉನ್ನತ ಅಧಿಕಾರದಲ್ಲಿರುವ ಅಂತಹ ರಾಜಕಾರಣಿಗಳ ಮಕ್ಕಳು ಸೇವೆ ಮಾಡಲು ರಾಜಕಾರಣ ಬದಲು ಪರ್ಯಾಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆ ಗುಬ್ಬಿ ಪಟ್ಟಣದಲ್ಲಿರುವ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ ಸಮುದಾಯದ ಮಠಾಧಿಪತಿಗಳ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ರಾಜಕಾರಣದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಮತ್ತು ದೇಶದ ಜನ ಅಧಿಕಾರದಲ್ಲಿರುವವರ ಮಕ್ಕಳು ಮತ್ತು ಅವರ ಕುಟುಂಬದವರ ವರ್ತನೆಯನ್ನು ಗಮನಿಸುತ್ತಿದ್ದಾರೆ. ಹೀಗಾಗಿ ಅಧಿಕಾರದಲ್ಲಿರುವವರ ಸಮೀಪ ಕೂಡ ಅವರ ಮಕ್ಕಳು, ಸಂಬಂಧಿಗಳು ಹೋಗದೇ ಸ್ವಯಂ ತಾವೇ ನಿರ್ಬಂಧ ಹೇರಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಹೈ ಕಮಾಂಡ್ ಯಾವ ತಪ್ಪುಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಅದೆಲ್ಲವನ್ನು ಮರೆತು ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ದೊಡ್ಡಗುಣಿ ಶ್ರೀ ರೇವಣ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ 40 ವರ್ಷಗಳಿಂದ ಯಡಿಯೂರಪ್ಪ ನಿರಂತರವಾಗಿ ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಯಾವುದೇ ಜಾತಿ ಮತ ಭೇದ -ಭಾವವಿಲ್ಲದೆ ಎಲ್ಲ ಮಠಗಳಿಗೂ ಅನುದಾನ ನೀಡಿದ್ದಾರೆ. ಈ ಮೂಲಕ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ನಿಲುವು ಹೊಂದಿದ್ದಾರೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬಾರದು ಎಂದು ಬಿಜೆಪಿ ಹೈಕಮಾಂಡ್ಗೆ ಆಗ್ರಹಿಸಿದರು.