ತುರುವೇಕೆರೆ (ತುಮಕೂರು ಜಿಲ್ಲೆ): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯನ್ನು ಗೇಲಿ ಮಾಡಿದ್ದ ಬಿಜೆಪಿಗೆ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರೂ ಅಭ್ಯರ್ಥಿಗಳು ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರೂ ನಾಮನಿರ್ದೇಶಿತರು ತಮ್ಮದೇ ಆದ ವಿಶಿಷ್ಟ ಸ್ಥಾನಮಾನ ಮತ್ತು ದೃಷ್ಟಿಕೋನವನ್ನು ಹೊಂದಿದ್ದಾರೆ. ಯಾರನ್ನಾದರೂ 'ರಿಮೋಟ್ ಕಂಟ್ರೋಲ್' ಎಂದು ಕರೆಯುವುದು ಇಬ್ಬರನ್ನೂ ಅವಮಾನಿಸಿದಂತೆ ಎಂದು ರಾಹುಲ್ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಅದು ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರ ಹರಡುತ್ತಿದೆ ಎಂದು ದೂಷಿಸಿದರು. ಬಿಜೆಪಿಯದು ದೇಶ ವಿರೋಧಿ ಕೃತ್ಯವಾಗಿದೆ ಮತ್ತು ದ್ವೇಷ ಹಿಂಸಾಚಾರ ಹರಡುವ ಎಲ್ಲರ ವಿರುದ್ಧವೂ ತಾನು ಹೋರಾಡಲಿರುವುದಾಗಿ ಅವರು ತಿಳಿಸಿದರು.
ನಮ್ಮದು ಫ್ಯಾಸಿಸ್ಟ್ ಪಕ್ಷವಲ್ಲ. ನಮ್ಮದು ಮುಕ್ತ ಚರ್ಚೆಯನ್ನು ನಂಬುವ ಪಕ್ಷ ಮತ್ತು ನಾವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇವೆ. ಚುನಾವಣೆಗಳನ್ನು ಗೆಲ್ಲಲು ನಾವು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಭ್ಯರ್ಥಿಗಳಾಗಿದ್ದಾರೆ. ಅಕ್ಟೋಬರ್ 17 ರಂದು ಮತದಾನ ನಡೆಯಲಿದೆ.
ರಾಜಸ್ಥಾನದಲ್ಲಿ ಅದಾನಿ ಹೂಡಿಕೆ ವಾಗ್ದಾನ - ರಾಹುಲ್ ಹೇಳಿದ್ದೇನು?: ಗೌತಮ್ ಅದಾನಿ ಅವರು ರಾಜಸ್ಥಾನದಲ್ಲಿ ಭಾರಿ ಹೂಡಿಕೆಗೆ ವಾಗ್ದಾನ ಮಾಡಿದ ಒಂದು ದಿನದ ನಂತರ, ಕಾಂಗ್ರೆಸ್ ಸರ್ಕಾರವು ಕೈಗಾರಿಕೋದ್ಯಮಿಗೆ ಯಾವುದೇ ಆದ್ಯತೆ ನೀಡಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟ್‌ಗಳ ವಿರುದ್ಧ ಅಲ್ಲ ಆದರೆ ಏಕಸ್ವಾಮ್ಯದ ವಿರುದ್ಧ ನಾವಿದ್ದೇವೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ರಾಜಸ್ಥಾನ ಸರ್ಕಾರ ಅದಾನಿ ಹೂಡಿಕೆ ಅಥವಾ ವ್ಯವಹಾರಕ್ಕೆ ತಪ್ಪಾಗಿ ಅನುಮತಿ ನೀಡಿದ್ದರೆ ಅದನ್ನು ತಾನು ವಿರೋಧಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಅದಾನಿ ಅಲ್ಲಿನ ಸಿಎಂ ಜತೆ ವೇದಿಕೆ ಹಂಚಿಕೊಂಡು ಹೂಡಿಕೆ ಬಗ್ಗೆ ಘೋಷಣೆ ಮಾಡಿದ್ದರು. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
60 ಸಾವಿರ ಕೋಟಿ ರೂಗಳ ಹೂಡಿಕೆ ಪ್ರಸ್ತಾಪ ಬಂದಾಗ ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಲಿ ನಿರಾಕರಿಸಲು ಸಾಧ್ಯವಿಲ್ಲ. ಆದರೆ ವಾಸ್ತವವಾಗಿ ಹಾಗೆ ನಿರಾಕರಿಸುವುದು ಸರಿಯಾದುದಲ್ಲ. ನಾನು ಹೇಳುವುದೇನು ಎಂದರೆ ಆಯ್ದ ಕೆಲವು ವ್ಯವಹಾರಗಳಿಗೆ ಸಹಾಯ ಮಾಡಲು ರಾಜಕೀಯ ಅಧಿಕಾರ ಬಳಕೆ ಮಾಡುವ ಬಗ್ಗೆ ನನ್ನ ಆಕ್ಷೇಪ ಇದೆ ಎಂದು ರಾಹುಲ್ ಹೇಳಿದ್ದಾರೆ.
ನಾನು ಯಾರ ವಿರುದ್ಧವೂ ಇಲ್ಲ ಏಕಸ್ವಾಮ್ಯದ ವಿರುದ್ಧ ಇದ್ದೇನೆ: ನನ್ನ ವಿರೋಧ ಇರುವುದು ಕೇವಲ ಎರಡ್ಮೂರು ಅಥವಾ ನಾಲ್ಕಾರು ದೊಡ್ಡ ಉದ್ಯಮಿಗಳು ಮಾತ್ರ ಬೆಳೆಯಲು ಹಾಗೂ ಏಕಸ್ವಾಮ್ಯಗೊಳ್ಳಲು ರಾಜಕೀಯ ಸಹಾಯ ಮಾಡುವುದಕ್ಕೆ. ದೇಶದಲ್ಲಿ ಈಗ ಹಾಗೇ ಆಗುತ್ತಿದೆ. ನಾನು ಯಾವುದೇ ರೀತಿಯಲ್ಲಿ ಕಾರ್ಪೊರೇಟ್‌ಗಳ ವಿರುದ್ಧವಾಗಿಲ್ಲ, ನಾನು ಯಾವುದೇ ವ್ಯಾಪಾರದ ವಿರುದ್ಧವಾಗಿಯೂ ಇಲ್ಲ. ಆದರೆ, ನಾನು ಭಾರತೀಯ ವ್ಯಾಪಾರದ ಸಂಪೂರ್ಣ ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ ಅದು ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ಮೂರು ಬಾರಿ ಸಿಎಂ ಪಟ್ಟ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದ ಖರ್ಗೆ: ಸೋಲಿಲ್ಲದ ಸರದಾರ ನಡೆದು ಬಂದ ದಾರಿ ಹೀಗಿದೆ...