ತುಮಕೂರು: ತುಮಕೂರು ತಾಲೂಕು ಚಿಕ್ಕಹಳ್ಳಿ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯ ಸುಳಿವು ಪತ್ತೆ ಹಚ್ಚಲು ಒಂದು ಲಕ್ಷ ಮಂದಿಯ ಮೊಬೈಲ್ ನಂಬರ್ಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ತಿಳಿಸಿದ್ದಾರೆ.
ತುಮಕೂರಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿ ಸುಳಿವು ಬಿಟ್ಟು ಹೋಗಿಲ್ಲ. ಹೀಗಾಗಿ ಘಟನೆ ನಡೆದ ಸ್ಥಳದ ಸುತ್ತಮುತ್ತಲು, ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್ ನಂಬರ್ಗಳನ್ನು 20 ಪೊಲೀಸರ ತಂಡಗಳು ಪತ್ತೆ ಹಚ್ಚಿ ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಘಟನೆ ನಡೆದ ಸ್ಥಳದ ಸುತ್ತಮುತ್ತಲ 3 ಮೊಬೈಲ್ ಟವರ್ಗಳಲ್ಲಿನ ಮೊಬೈಲ್ ನಂಬರ್ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಓರ್ವ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಘಟನೆಗೂ ಅತ್ಯಾಚಾರ ಘಟನೆಗೂ ತಾಳೆ ಹಾಕಲಾಗುತ್ತಿದೆ ಎಂದರು.
ಇದೇ ವೇಳೆ, ಇನ್ನೊಂದು ವಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಇನ್ನೂ ಆಗಿಲ್ಲ ಅತ್ಯಾಚಾರಿಗಳ ಬಂಧನ; ತುಮಕೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ
ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳು ಸಾಕಷ್ಟು ಸುಳಿವು ಬಿಟ್ಟುಹೋಗಿದ್ದರು. ಅಲ್ಲದೇ, ಅದರಲ್ಲಿ ಆರು ಮಂದಿ ಘಟನೆ ನಡೆಯಲು ಕಾರಣರಾಗಿದ್ದರು. ಹೀಗಾಗಿ ಅಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿತ್ತು. ಆದರೆ ತುಮಕೂರಿನಲ್ಲಿ ನಡೆದ ಘಟನೆ ಪ್ರದೇಶವು ನಿರ್ಜನ ಪ್ರದೇಶವಾಗಿದ್ದು, ಕಾಡು ಮೇಡಿನಿಂದ ಕೂಡಿದ್ದಾಗಿದೆ. ಹೀಗಾಗಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚುವುದು ಕ್ಲಿಷ್ಟಕರವಾಗಿದೆ ಎಂದು ತಿಳಿಸಿದರು.