ತುಮಕೂರು: ಕೊರೊನಾ ಎರಡನೇ ಅಲೆ ವೇಳೆ ರಕ್ತದ ಕೊರತೆಯಿಂದಾಗಿ ಅನೇಕ ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಮೂರನೇ ಅಲೆ ವೇಳೆ ಇಂತಹ ಸಮಸ್ಯೆ ಉಂಟಾಗಬಾರದೆಂದು ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಬರೋಬ್ಬರಿ 2000 ಯೂನಿಟ್ ರಕ್ತ ಸಂಗ್ರಹಿಸಲು ಸಿದ್ಧತೆ ಮಾಡಿಕೊಂಡಿವೆ.
ತುಮಕೂರು ನಗರದ 35 ವಾರ್ಡ್ಗಳಲ್ಲಿ ಮತ್ತು ಎಲ್ಲ ತಾಲೂಕು ಹೋಬಳಿ ಕೇಂದ್ರಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿ, ರಕ್ತ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕು ಎಂಬ ಜಾಗೃತಿ ಸಂದೇಶದೊಂದಿಗೆ ಈ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಆಗಸ್ಟ್ ತಿಂಗಳ ಅಂತ್ಯದವರೆಗೂ ರಕ್ತದಾನ ಸಪ್ತಾಹ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸತ್ಯಸಾಯಿ ಆರ್ಗನೈಜೇಷನ್ ರೋಟರಿ ಕ್ಲಬ್ ಹಾಲಪ್ಪ ಪ್ರತಿಷ್ಠಾನದ ಕ್ರೀಡಾಪಟುಗಳು ಹಾಗೂ ಸರ್ಕಾರಿ ರಕ್ತ ನಿಧಿ ಕೇಂದ್ರ ಮತ್ತು ಖಾಸಗಿ ರಕ್ತ ನಿಧಿ ಕೇಂದ್ರಗಳ ಸಹಕಾರದೊಂದಿಗೆ 2000 ಯೂನಿಟ್ ರಕ್ತ ಸಂಗ್ರಹಕ್ಕೆ ಸಂಘ ಸಂಸ್ಥೆಗಳು ಮುಂದಾಗಿವೆ. ದಿನಕ್ಕೆ ಜಿಲ್ಲೆಯಲ್ಲಿ 70 ರಿಂದ 100 ಯೂನಿಟ್ ರಕ್ತದ ಅವಶ್ಯಕತೆ ಇದೆ. ತಿಂಗಳಿಗೆ ಸುಮಾರು 1000 ಕ್ಕೂ ಹೆಚ್ಚು ಯೂನಿಟ್ ಅವಶ್ಯಕತೆ ಇದ್ದು, 400 ಕ್ಕಿಂತ ಕಡಿಮೆ ಯೂನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ.
ಜಿಲ್ಲೆಯಲ್ಲಿ ಮೂರನೇ ಅಲೆ ವೇಳೆ ರಕ್ತದ ಕೊರತೆಯಿಂದ ಯಾವುದೇ ರೋಗಿಗಳು ಬಳಲಬಾರದು ಎಂಬ ಮಹತ್ವದ ಉದ್ದೇಶದಿಂದ ಹತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ರಕ್ತ ಸಂಗ್ರಹಿಸಲು ಕಾರ್ಯೋನ್ಮುಖವಾಗಿವೆ.