ತುಮಕೂರು : ಕುಣಿಗಲ್ ಪಟ್ಟಣದ ಖಾಸಗಿ ವಸತಿಗೃಹದಲ್ಲಿ ನಡೆದ ಮಹಿಳೆ ಕೊಲೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕುಣಿಗಲ್ ಡಿವೈಎಸ್ಪಿ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಮೃತ ಮಹಿಳೆಯು ಕುಣಿಗಲ್ ತಾಲೂಕಿನ ತಾವರೆಕೆರೆ ಗ್ರಾಮದವರು ಎಂಬುದು ತಿಳಿದು ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, "ಕೊಲೆಯಾದ ಮಹಿಳೆಯ ಜೊತೆ ತಾವರೆಕೆರೆ ಗ್ರಾಮದ ಮಂಜುನಾಥ್ ಎಂಬಾತ ಕೂಡ ಖಾಸಗಿ ವಸತಿಗೃಹದಲ್ಲಿ ಬಂದು ಉಳಿದುಕೊಂಡಿದ್ದ. ಇಬ್ಬರು ತಾವರೆಕೆರೆಯಿಂದ ಚಿಕ್ಕಣ್ಣ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದರು. ವಾಪಸ್ ಗ್ರಾಮಕ್ಕೆ ಹೋಗುವಾಗ ತಡವಾದ ಹಿನ್ನೆಲೆ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ವೈಯಕ್ತಿಕ ಕಾರಣಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊಲೆ ನಡೆದಿದೆ. ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿತ್ತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ" ಎಂದರು. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
7 ಮಂದಿ ಆರೋಪಿಗಳ ಬಂಧನ : ಶಿವಮೊಗ್ಗದ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಜಿಲ್ಲಾ ಪೊಲೀಸರು ಜೂನ್ 30 ರಂದು ಬಂಧಿಸಿ, ಆರೋಪಿಗಳು ದೋಚಿದ್ದ 35 ಲಕ್ಷ ರೂ. ಹಣವನ್ನೂ ಜಪ್ತಿ ಮಾಡಿದ್ದರು. ಜೂನ್ 17 ರಂದು ರಾತ್ರಿ 11 ಗಂಟೆ ಸುಮಾರಿಗೆ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ 57 ವರ್ಷದ ಕಮಲಮ್ಮ ಎಂಬವರನ್ನು ಬಾಯಿ ಮುಚ್ಚಿ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಅವರ ಮನೆಯ ಕಾರು ಚಾಲಕನೇ ಕೊಲೆ ಮಾಡಿ ಪರಾರಿಯಾಗಿದ್ದ.
ಇದನ್ನೂ ಓದಿ : Bengaluru crime : ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾರು ಚಾಲಕ ಹನುಮಂತ ನಾಯ್ಕ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದರು. ಎ1 ಆರೋಪಿ ಹನುಮಂತ ನಾಯ್ಕ ಆಗಿದ್ದು, ಆತನ ಸಹಚರರಾದ ಪ್ರದೀಪ್, ಅಪ್ಪು ನಾಯ್ಕ, ಪ್ರಭು ನಾಯ್ಕ, ಸತೀಶ್, ರಾಜು ಹಾಗೂ ಕಾರು ನೀಡಿದ್ದ ಕೌಶಿಕ್ ಎಂಬುವರು ಪೊಲೀಸರು ಅತಿಥಿಯಾಗಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 33,74,800 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಕಾ ಕಾರು, 7 ಮೊಬೈಲ್ ಫೋನ್ಗಳು, 3 ಬೈಕ್ ಮತ್ತು ಕೊಲೆ ಮಾಡಲು ಬಳಸಿದ ಆಯುಧ ಸೇರಿದಂತೆ ಒಟ್ಟು 41,14,800 ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ : ಶಿವಮೊಗ್ಗದ ಒಂಟಿ ಮಹಿಳೆ ಕೊಲೆ ಪ್ರಕರಣ : ಮನೆಯ ಕಾರು ಚಾಲಕ ಸೇರಿ 7 ಆರೋಪಿಗಳ ಬಂಧನ