ತುಮಕೂರು: ಟೀ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರೊಂದಿಗೆ, ಜನರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವರಾಯನದುರ್ಗ ಪ್ರದೇಶದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಎದುರು ಟೀ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಉರ್ಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಸಲ ನಡೆದ ಚುನಾವಣೆಯಲ್ಲಿ ದೇವರಾಯನದುರ್ಗದಿಂದ ಉರ್ಡಿಗೆರೆ ಗ್ರಾ ಪಂಗೆ ಸದಸ್ಯರಾಗಿ ಚುನಾಯಿತರಾಗಿದ್ದ ಕೆ.ಎಸ್. ಅನ್ನಪೂರ್ಣಮ್ಮ ಅವರಿಗೆ ಗುರುವಾರ ನಡೆದ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಗ್ರಾಪಂ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಳಿಸಿದರು. ಅನ್ನಪೂರ್ಣಮ್ಮ ಗ್ರಾಪಂ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದಂತೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.
ಅಭಿವೃದ್ಧಿ ಸವಾಲು: ಉರ್ಡಿಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರದ ಯೋಜನೆಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ನೂತನ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರ ಧ್ಯೇಯವಾಗಿದೆ. ಈಟಿವಿ ಭಾರತದೊಂದಿಗೆ ಅನ್ನಪೂರ್ಣ ಕೆ ಎಸ್ ಮಾತನಾಡಿ, ನಿನ್ನೆ ನೆಡೆದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರು ನನ್ನನು ಅವಿರೋಧವಾಗಿ ಆಯ್ಕೆಮಾಡಿದರು.
ಮೋದಿ ಅವರು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಒಳ್ಳೆಯ ಸ್ಥಾನಮಾನ ಸಿಗಬೇಕೆಂದು ಹೇಳಿದ್ದಾರೆ. ಅವರ ಹೇಳಿಕೆಯಂತೆ ತುಮಕೂರು ಗ್ರಾಮಾಂತರ ಶಾಸಕರು ಟೀ ಮಾರುತ್ತಿದ್ದ ನನ್ನನು ಗುರುತಿಸಿ ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹಿಸಿದ್ದರು. ಬಳಿಕ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗ್ರಾಪಂ ಸದಸ್ಯರ ಬೆಂಬಲ ಹಾಗೂ ಶಾಸಕರ ಸಹಕಾರದಿಂದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾ ಪಂ ಅಧ್ಯಕ್ಷೆಯಾದರೂ ಚಹಾ ಮಾರೋದು ಬಿಡಲಿಲ್ಲ: ಅನ್ನಪೂರ್ಣಮ್ಮ ಅವರು ಗ್ರಾ ಪಂ ಅಧ್ಯಕ್ಷೆಯಾದ್ರೂ ಚಹ ಮಾರೋದು ಬಿಡಲಿಲ್ಲ. ಅನ್ನಪೂರ್ಣಮ್ಮ ಹೊಟ್ಟೆ ಪಾಡಿಗೆ ಚಹಾ, ಗ್ರಾಮದ ಸೇವೆಗಾಗಿ ಗ್ರಾ ಪಂ ಅಧ್ಯಕ್ಷೆ ಸ್ಥಾನ ಅಲಂಕರಿಸಿ, ಕಾರ್ಯ ನಿರ್ವಹಣೆಯನ್ನೂ ಮುಂದುವರೆಸಿದ್ದಾರೆ.
ಒಟ್ಟಾರೆ ದೇವಸ್ಥಾನದ ಎದುರು ಟೀ ಮಾರುವ ಜೊತೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ತನ್ನ ಕೆಲಸವನ್ನ ಅತ್ಯುತ್ತಮವಾಗಿ ನಿರ್ವಹಿಸುವೆ ಎಂದು ಅನ್ನಪೂರ್ಣಮ್ಮ ಭರವಸೆ ಕೊಟ್ಟಿದ್ದಾರೆ. ಅವರ ಕನಸು ನನಸಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದಕ್ಕೆ ಅನ್ನಪೂರ್ಣಮ್ಮ ಅವರಿಗೆ ಇನ್ನಿಲ್ಲದ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟೀ ಅಂಗಡಿ ನಡೆಸುವ ಜೊತೆ ಜೊತೆಗೆ ಗ್ರಾಮ ಪಂಚಾಯಿತಿ ಎಲ್ಲ ಜವಾಬ್ದಾರಿಯನ್ನು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಸನ್ನದ್ದರಾಗಿದ್ದಾರೆ. ಅಲ್ಲದೇ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವ ಕುರಿತು ಗ್ರಾಮದ ಜನರಿಗೆ ಭರವಸೆ ಕೂಡ ನೀಡಿದ್ದಾರೆ.
ಇದನ್ನೂಓದಿ: ಮಕ್ಕಳಿಗೆ ಕೃಷಿ ಪಾಠ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು