ತುಮಕೂರು: ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯದೊಂದಿಗೆ 66ನೇ ವರ್ಷದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಇದೇ ತಿಂಗಳ 14ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 21 ಜಿಲ್ಲೆಗಳಲ್ಲಿ ಸಹಕಾರಿ ಮಹಾಮಂಡಳದ ಶಾಖೆಗಳಿವೆ. ಅದರಲ್ಲಿ ಬರ ಹಾಗೂ ನೆರೆ ಇದ್ದಂತಹ ಪ್ರದೇಶಗಳನ್ನು ಹೊರತುಪಡಿಸಿ ಏಳು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮ ತುಮಕೂರಿನಲ್ಲಿ ನಡೆಸಿದರೆ, ಉಳಿದ ಆರು ದಿನಗಳ ಕಾರ್ಯಕ್ರಮಗಳನ್ನು ಕೊಪ್ಪಳ, ಯಾದಗಿರಿ, ಉತ್ತರ-ಕನ್ನಡ ಜಿಲ್ಲೆಯ ಕುಮಟಾ, ಮಂಗಳೂರು, ಹಾಸನ ಹಾಗೂ ಕೊನೆಯ ದಿನದ ಸಮಾರೋಪ ಸಮಾರಂಭವನ್ನು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಮೊದಲನೇ ದಿನ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜೊತೆಗೆ ಸಹಕಾರ ರತ್ನ ಪ್ರಶಸ್ತಿ ಪಡೆದವರನ್ನು ಗೌರವಿಸಲಿದ್ದಾರೆ ಎಂದರು. ಈ ಹಿಂದೆ ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಈಗ ಯೋಜನೆ ಸ್ಥಗಿತವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಹಾಲು ಒಕ್ಕೂಟದ ಅಧ್ಯಕ್ಷ ಸಿ.ಬಿ ಮಹಾಲಿಂಗಯ್ಯ ಮಾತನಾಡಿ, ಕೇಂದ್ರ ಸರ್ಕಾರ ಆರ್ಸಿಇಪಿ ಒಪ್ಪಂದಕ್ಕೆ ಸಹಿ ಮಾಡಿದ್ದರೆ ದೇಶದಲ್ಲಿ ಹೈನುಗಾರಿಕೆಗೆ ಹೊಡೆತ ಬೀಳುತ್ತಿತ್ತು. ಆದರೆ ಸರ್ಕಾರ ಆಲೋಚನೆ ಮಾಡಿ ಈ ಒಪ್ಪಂದಕ್ಕೆ ಸಹಿ ಹಾಕದೆ ಇರುವುದು ಒಳ್ಳೆಯ ಕೆಲಸವಾಗಿದೆ. ಮುಂದೆಯೂ ಕೂಡ ಯಾವುದೇ ಕಾರಣಕ್ಕೂ ಈ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದರು.