ತುಮಕೂರು: ಜಿಲ್ಲೆಯಲ್ಲಿ ಇದುವರೆಗೆ ಐವರು ಗರ್ಭಿಣಿಯರಲ್ಲಿ ಮತ್ತು ಬಾಣಂತಿಯೋರ್ವರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊನ್ನೆ ಇಬ್ಬರು ಮತ್ತು ಇಂದು ಮೂವರು ಗರ್ಭಿಣಿಯರು ಸೇರಿದಂತೆ ಒಟ್ಟು ಐವರಲ್ಲಿ ಹಾಗೂ ಮೊನ್ನೆ ಓರ್ವ ಬಾಣಂತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಇಂದು ಕೂಡಾ ಮೂವರು ಪೊಲೀಸರಿಗೆ ಸೋಂಕು ತಗುಲಿದ್ದು, ಇದುವರೆಗೂ ಜಿಲ್ಲೆಯಲ್ಲಿ 34 ಮಂದಿ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಇಂದು ಜಿಲ್ಲೆಯ 25 ಮಂದಿಗೆ ಸೋಂಕು ತಗಲಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನಲ್ಲಿ 11, ತುರುವೇಕೆರೆ ತಾಲೂಕಿನಲ್ಲಿ 7, ಪಾವಗಡ ತಾಲೂಕಿನಲ್ಲಿ 3, ಕುಣಿಗಲ್ ತಾಲೂಕಿನಲ್ಲಿ 2, ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 478 ಕ್ಕೆ ಏರಿಕೆಯಾಗಿದೆ.
ಅಲ್ಲದೇ ಇದುವರೆಗೂ 14 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 338 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.