ತುಮಕೂರು: ಯಾವುದೇ ಒಂದು ಬೀಜ ಮೊಳಕೆಯೊಡೆದು ಮರವಾಗಿ ಫಲ ಕೊಡಲು ನೀರು ಮಣ್ಣು ಬೇಕು. ಫಲ ಕೊಡುವುದು ನಂತರದ ಮಾತು. ಆದರೆ ಒಂದು ಗಿಡ ಗಟ್ಟಿಯಾಗಿ ಬೇರೂರಿ ಮರವಾಗಬೇಕಾದರೆ ಫಲವತ್ತಾದ ಮಣ್ಣು ಬೇಕು. ಆದರೆ ತುಮಕೂರು ಜಿಲ್ಲೆಯಲ್ಲೊಂದು ವಿಸ್ಮಯದ ಸಂಗತಿ ನಡೆದಿದೆ. ಮಣ್ಣಿನ ಆಶ್ರಯವೇ ಇಲ್ಲದೆ ಇಲ್ಲಿ ಒಂದೇ ತೆಂಗಿನ ಮರದ ತುದಿಯಲ್ಲಿ 20 ಕ್ಕೂ ಹೆಚ್ಚು ತೆಂಗಿನ ಮರಗಳು ಬೆಳೆದು ನಿಂತಿವೆ. ಈ ಪ್ರಕೃತಿಯ ವಿಸ್ಮಯ ಕಂಡು ಊರು ಮಾತ್ರವಲ್ಲ ಇಡೀ ತುಮಕೂರು ಜಿಲ್ಲೆಯೇ ಅಚ್ಚರಿಗೊಂಡಿದೆ.
ಈ 20ಕ್ಕೂ ಹೆಚ್ಚು ತೆಂಗಿನ ಮರಗಳು ಒಂದೇ ಮರದ ತುದಿಯಲ್ಲಿ ಬೆಳೆದು ನಿಂತಿರುವುದು ಮಾತ್ರವಲ್ಲದೆ ಉತ್ತಮ ಫಲವನ್ನೂ ಕೊಡುತ್ತಿವೆ. ಈ ತೆಂಗಿನ ಮರ ಭೂಮಿಯಿಂದ 30 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿದೆ. ನಾವು ಇದುವರೆಗೆ ಎಲ್ಲಿಯೂ ತೆಂಗಿನ ಮರಕ್ಕೆ ಸೋಗೆಗಳು ಬಿಟ್ಟರೆ ಕೊಂಬೆಗಳನ್ನು ನೋಡಿರಲಿಕ್ಕಿಲ್ಲ. ಆದರೆ ಮಣ್ಣೇ ಇಲ್ಲದೆ ಮರದ ತುದಿಯಲ್ಲಿ ಬೆಳೆದಿರುವ 20 ಕ್ಕೂ ಹೆಚ್ಚು ಮರಗಳು ಕೊಂಬೆಗಳಂತೆಯೇ ಕಾಣಿಸುತ್ತಿವೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಲ್ಲದೇವರಹಳ್ಳಿ ಗ್ರಾಮದ ರಂಗಪ್ಪ ಅವರ ತೋಟದಲ್ಲಿ ಇಂತಹ ವಿಶಿಷ್ಟ ತೆಂಗಿನ ಮರವಿದೆ. ಈ ತೆಂಗಿನ ಮರ ಈ ರೀತಿ ಕೊಂಬೆಗಳಂತೆ ತನ್ನ ತುದಿಯಲ್ಲಿ ಹೊಸ ತೆಂಗಿನಗಿಡಗಳಿಗೆ ಜೀವ ಕೊಟ್ಟಂದಿನಿಂದಲೇ ಅಂದರೆ ಹಲವು ವರ್ಷಗಳಿಂದ ರಂಗಪ್ಪ ಇದಕ್ಕೆ ಪೂಜೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ವಿಷಯ ಇದೀಗ ಬೆಳಕಿಗೆ ಬಂದಿದೆ.
ಏನ್ ಹೇಳ್ತಾರೆ ತೋಟದ ಮಾಲೀಕ?: ತೋಟದ ಮಾಲೀಕ ರಂಗಪ್ಪ ಅವರೇ ಹೇಳುವಂತೆ ಈ ವಿಸ್ಮಯ ತೆಂಗಿನ ಮರವನ್ನು ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇವೆ. ಇದರಿಂದ ಕುಟುಂಬಕ್ಕೆ ತುಂಬಾನೇ ಒಳ್ಳೆಯದು ಆಗಿದೆ. ಅಷ್ಟೇ ಅಲ್ಲದೆ, ಗ್ರಾಮದ ಹಲವರು ಬಂದು ಪೂಜೆ ಮಾಡಿಕೊಂಡು ಹೋಗ್ತಾರೆ. ಈ ತೆಂಗಿನ ಮರಕ್ಕೆ ಪೂಜೆ ಮಾಡಿಕೊಂಡು ಹರಕೆ ಕಟ್ಟಿಕೊಂಡ್ರೆ ಒಳ್ಳೆಯದು ಆಗ್ತದೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ ಎನ್ನುತ್ತಾರೆ.
ಇದೊಂದು ಪ್ರಕೃತಿಯ ವಿಸ್ಮಯ. ಈ ತರಹದ ತೆಂಗಿನ ಮರವನ್ನು ಎಲ್ಲೂ ನೋಡಿರಲಿಲ್ಲ. ಕೇಳಿಯೂ ಇರಲಿಲ್ಲ. ಇಂತಹ ಮರ ನೋಡಿ ನನಗೂ ವಿಶೇಷ ಹಾಗೂ ಆಶ್ಚರ್ಯ ಅನ್ನಿಸುತ್ತಿದೆ. ಮಣ್ಣಿನ ಸಹಾಯವೇ ಇಲ್ಲದೆ ಹೇಗೆ ಬೆಳೆದಿದೆ ಅನ್ನೋದೆ ವಿಸ್ಮಯ. ಈ ರೀತಿ ತೆಂಗಿನ ಮರ ಬೆಳೆಯೋದಕ್ಕೆ ಹೇಗೆ ಸಾಧ್ಯ ಎಂಬ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ ಮಾಡ್ತೇನೆ. ಈ ಮರಕ್ಕೆ ಹಲವು ಮಂದಿ ಪೂಜೆ ಮಾಡ್ತಿದ್ದಾರೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತುಂಬಾನೇ ಒಳ್ಳೆಯದು ಆಗಿದೆ ಅಂತಾ ಹೇಳ್ತಿದ್ದಾರೆ ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂ ತಿಳಿಸಿದ್ದಾರೆ.
ಮಣ್ಣಿನ ಮೇಲೆಯೇ ಮರಗಳು ಬೆಳೆಯೋದು ಕಷ್ಟ. ಅಂತಹದರಲ್ಲಿ ಮಣ್ಣಿನ ಅಂಶವೇ ಇಲ್ಲದ ಈ ತೆಂಗಿನ ಮರದ ತುದಿಯಲ್ಲಿ ಹೇಗೆ ಬೆಳೆದಿದೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ. ದೇವರ ಸೃಷ್ಟಿ ಅಂದುಕೊಂಡು ಪೂಜೆಯನ್ನೂ ಮಾಡ್ತಿದ್ದಾರೆ.
ಇದನ್ನೂ ಓದಿ: 8 ಕೆಚ್ಚಲು ಹೊಂದಿರುವ ಕರುವಿಗೆ ಜನ್ಮ ನೀಡಿದ ಹಸು! ಪಶುವೈದ್ಯರು ಹೇಳುವುದೇನು?