ಬೆಂಗಳೂರು: ನೇಕಾರರಿಗೆ ಘೋಷಣೆ ಮಾಡಿರುವ ಪರಿಹಾರದ ಪ್ಯಾಕೇಜ್‍ನ್ನು ಶೀಘ್ರವೇ ಜಾರಿಗೆ ತಂದು ಹಣ ಬಿಡುಗಡೆ ಮಾಡುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನೇಕಾರರ ಬದುಕು ದಿನೇ ದಿನೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದೆ. ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಸರ್ಕಾರ ಪ್ರತಿ ನೇಕಾರರ ಕುಟುಂಬಕ್ಕೆ ರೂ.2,000 ಗಳನ್ನು ನೀಡುವುದಾಗಿ ಘೋಷಿಸಿ 2 ತಿಂಗಳು ಕಳೆದರೂ ಇದುವರೆಗೆ ಒಂದೇ ಒಂದು ರೂಪಾಯಿಯನ್ನು ಕೂಡ ನೇಕಾರರ ಕುಟುಂಬಗಳಿಗೆ ತಲುಪಿಲ್ಲ. ಸರ್ಕಾರವು ಸಂಪೂರ್ಣವಾಗಿ ನೇಕಾರರನ್ನು ನಿರ್ಲಕ್ಷಿಸಿದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಹಾಗಾಗಿ ಅತ್ಯಂತ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದು ವಿವರಿಸಿದ್ದಾರೆ.
ಸರ್ಕಾರವು ನೇಕಾರರ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಪರಿಹರಿಸಬೇಕೆಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.