ಬೆಂಗಳೂರು : ವಿಧಾನಸಭೆ ಕಲಾಪ ಶನಿವಾರದವರೆಗೆ ಮುಂದುವರಿಯಲಿದೆ. ಸಾಕಷ್ಟು ಚರ್ಚೆಗೆ ಅವಕಾಶ ನೀಡಲು ಸರ್ಕಾರ ಒಪ್ಪಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಾಪ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಕಾಯ್ದೆಗಳಿಗೆ ಅಧಿಸೂಚನೆ ತಂದಿದ್ದಾರೆ. ಎಪಿಎಂಸಿ, ಲ್ಯಾಂಡ್ ರಿಫಾರ್ಮ್ಸ್ ಮುಂತಾದ ಕಾಯ್ದೆಯಲ್ಲಿ ತಿದ್ದುಪಡಿ ತಂದಿದ್ದಾರೆ. ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕು, ನಾವು ಗಂಭೀರವಾಗಿ ಇದರ ಬಗ್ಗೆ ಮಾತನಾಡ್ತೇವೆ.
ಬಿಎಸಿ ಸಭೆಯಲ್ಲಿ ಯಡಿಯೂರಪ್ಪ ನಿಮಗೆ ಬೇಕಾದ ಬಿಲ್ ಬಗ್ಗೆ ಚರ್ಚೆ ಮಾಡಿ ಅಂದಿದ್ದಾರೆ. ನಾವು ಬಿಲ್ ಟೇಬಲ್ ಮಾಡ್ತೇವೆ ಅನ್ನುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. 40 ಬಿಲ್‌ಗಳಿವೆ, ಸಮಗ್ರ ಚರ್ಚೆಯಾಗಬೇಕು. ಕಲಾಪ ಹೆಚ್ಚು ದಿನ ನಡೆಸುವಂತೆ ಒತ್ತಾಯಿಸಿದ್ದೇವೆ. ಅವರು ಬೇಗನೇ ಮುಗಿಸೋಕೆ ಹೊರಟಿದ್ದರು. ಈಗ ಐದು ದಿನ ನಡೆಸೋಕೆ ಒಪ್ಪಿಗೆಯಾಗಿದೆ ಎಂದರು.
ಬೆಂಗಳೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ ವಿಚಾರ ಮಾತನಾಡಿ, ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಪ್ರತಿಭಟನಾ ಸ್ಥಳಕ್ಕೆ ಮಂತ್ರಿಗಳು, ಅಧಿಕಾರಿಗಳು ಯಾರು ಹೋಗಿಲ್ಲ. ರೈತರು ಪ್ರತಿಭಟನೆ ಮಾಡುತ್ತಿರೋದು ಸರಿ ಇದೆ. ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ. ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಬಗ್ಗೆ ಧರಣಿ ನಡೆಯುತ್ತಿದೆ. ಅಧಿಕಾರಿಗಳು ಅತ್ತ ತಿರುಗಿಯೂ ನೋಡಿಲ್ಲ ಎಂದರು.
ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್‌ರಾಜ್‌ಗೆ ಕಾಂಗ್ರೆಸ್ ನಾಯಕರು ರಕ್ಷಣೆ ನೀಡುತ್ತಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿ, ಸಂಪತ್‌ರಾಜ್‌ಗೆ ಯಾರು ರಕ್ಷಣೆ ನೀಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದರು.
ವಿಧಾನಸೌಧದಲ್ಲಿ ಬಿಜೆಪಿ ಸಚಿವ, ಶಾಸಕರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ಇಬ್ಬರೂ ಕೂಗಾಡ್ತಿದ್ರು. ಯಾರೇ ಆಗಲಿ ಎಂಎಲ್‌ಎ ಜೊತೆ ಸೌಜನ್ಯ ಇಟ್ಟುಕೊಳ್ಳಬೇಕು. ಆರು ಕೋಟಿ ಜನ ನಮ್ಮನ್ನು ನೋಡ್ತಿದ್ದಾರೆ. ಅವರು ಎಲ್ಲರನ್ನು ಗಮನಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಅವರು ಗಲಾಟೆ ಮಾಡಿಕೊಂಡರೆ ತಪ್ಪು.. ನಾನೇ ಅವರನ್ನು ಕರೆದು ಸಮಾಧಾನ ಮಾಡಿದೆ ಎಂದು ಹೇಳಿದರು.