ಬೆಂಗಳೂರು : ರಾಜಧಾನಿಯ ವಿಧಾನಸೌಧದಿಂದ ಹಿಡಿದು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ನಾಳೆ ಬೆಳಗ್ಗೆ 11 ಗಂಟೆ ಸಮಯಕ್ಕೆ ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಸ್ವೀಕರಿಸಬೇಕಾಗಿರುವ ಸಂಕಲ್ಪ ಮತ್ತು ಸ್ವರೂಪ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ವಿವರಿಸಿದ್ದಾರೆ. ಗೀತಗಾಯನದಲ್ಲಿ ಭಾಗವಹಿಸುವವರೆಲ್ಲರೂ ಬೆಳಗ್ಗೆ 10:45ಕ್ಕೆ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರಬೇಕು.
ಬೆಳಗ್ಗೆ 11 ಗಂಟೆಗೆ ಸ್ವಾಗತ ನುಡಿಗಳೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಮೊದಲಿಗೆ ನಾಡಗೀತೆ ಹಾಡಲಾಗುವುದು. ಆ ನಂತರ ಈಗಾಗಲೇ ಸೂಚಿಸಿರುವ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮ್ಮದ್ರವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಮೂರು ಗೀತೆಗಳು ಏಕಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ.
ಸಂಕಲ್ಪ : ಇದೇ ಸಂದರ್ಭದಲ್ಲಿ ಗೀತಗಾಯನದ ನಂತರ ಸಂಕಲ್ಪವೊಂದನ್ನು ಸ್ವೀಕರಿಸಬೇಕು. 'ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ.
ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂಬ ಸಂಕಲ್ಪವನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ.