ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ಕಾರ್ಯತಂಡವನ್ನು ರಚಿಸಿ ಆದೇಶ ಹೊರಡಿಸಿದೆ.
ಕೊರೊನಾ ಸೋಂಕಿತರನ್ನು ತಮ್ಮ ಮನೆಗಳಿಂದ ಹಾಗೂ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಂದ ಕೋವಿಡ್ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಿಗೆ ವರ್ಗಾವಣೆ ಮಾಡಲು ಕಾರ್ಯತಂಡವನ್ನು ರಚಿಸಲಾಗಿದೆ. ಬಿಬಿಎಂಪಿ ಆಯುಕ್ತರು ಈ ಕಾರ್ಯತಂಡಗಳ ಅಧ್ಯಕ್ಷರಾಗಿದ್ದು, ಕಾರ್ಯತಂಡದ ಸದಸ್ಯರು ಬಿಬಿಎಂಪಿ ಆಯುಕ್ತರಿಗೆ ವರದಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾರ್ಯತಂಡಗಳ ವಿವರ, ಹೊಣೆಗಾರಿಕೆ ಈ ಕೆಳಗಿನಂತಿದೆ..
ಕೋವಿಡ್ ರೋಗಿಗಳ ವರ್ಗಾವಣೆ ತಂಡ:
ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಈ ತಂಡದ ಉಸ್ತುವಾರಿ ವಹಿಸಲಿದ್ದಾರೆ. ಪಾಲಿಕೆ ವಿಶೇಷ ಆಯುಕ್ತ ರಣದೀಪ್, ಡಿಸಿಪಿ ಅನುಚೇತ್, ಡಾ.ಬಣಕರ್ ತಂಡದ ಸದಸ್ಯರಾಗಿರುತ್ತಾರೆ.
ಈ ತಂಡ ಸೋಂಕಿತರನ್ನು ತಮ್ಮ ಮನೆಗಳಿಂದ ಹಾಗೂ ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳಿಂದ ಕ್ಲಿನಿಕಲ್ ಅಸೆಸ್ ಮೆಂಟ್ ಕೇಂದ್ರಗಳಿಗೆ 6 ಗಂಟೆ ಒಳಗೆ ವರ್ಗಾವಣೆ ಮತ್ತು ಆರೋಗ್ಯ ಇಲಾಖೆ ಮಾನದಂಡದ ಪ್ರಕಾರ ಕೋವಿಡ್ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಬೇಕು.
ಐಸಿಎಂಆರ್ ಪೋರ್ಟಲ್ ನಲ್ಲಿನ ಮೊಬೈಲ್ ಸಂಖ್ಯೆ, ರೋಗಿ ಹಿಂದಿನ 14 ದಿನಗಳಲ್ಲಿ ಬಳಸಿದ ಸಂಖ್ಯೆಗಿಂತ ಬೇರೆಯಾಗಿದ್ದರೆ, ಮೊಬೈಲ್ ಸಂಖ್ಯೆಯನ್ನು ತಿದ್ದುಪಡಿ ಮಾಡುವುದನ್ನು ಖಚಿತಪಡಿಸಬೇಕು. ಸಂಪರ್ಕ ಪತ್ತೆಗಾಗಿ ಸಂಪರ್ಕ ಪತ್ತೆ ತಂಡ ಮತ್ತು ಪೊಲೀಸ್ ನೋಡಲ್ ಅಧಿಕಾರಿಗೆ ಸರಿಪಡಿಸಿದ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.
ಕಂಟೈನ್ಮೆಂಟ್ ವಲಯ ತಂಡ:
ಕಂಟೈನ್ಮೆಂಟ್ ವಲಯ ತಂಡದ ನೇತೃತ್ವವನ್ನು ಕೆಪಿಎಸ್ ಸಿ ಕಾರ್ಯದರ್ಶಿ ಸತ್ಯವತಿಗೆ ವಹಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಬಸವರಾಜ್, ಡಿಸಿಪಿ ದಿವ್ಯ ತಂಡದ ಸದಸ್ಯರಾಗಿರಲಿದ್ದಾರೆ.
ಕಂಟೈನ್ಮೆಂಟ್ ವಲಯದ ಪರಿಧಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಹೊಣೆ ಈ ತಂಡದ್ದಾಗಿದೆ. ಶಂಕಿತ ಪ್ರಕರಣಗಳ ಪತ್ತೆಗಾಗಿ ಕಂಟೈನ್ಮೆಂಟ್ ವಲಯ ಮತ್ತು ಸುತ್ತಮುತ್ತಲಿನ 100 ಮೀಟರ್ ಪ್ರದೇಶದಲ್ಲಿ ತೀವ್ರ ಸರ್ವೇಕ್ಷಣೆ ಮಾಡಬೇಕು.
ಸಾಮಾಜಿಕ ಅಂತರ ಕಾಪಾಡುವ ತಂಡ:
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಿನರಲ್ ನಿಗಮ ಎಂಡಿ ನವೀನ್ ರಾಜ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪಾಲಿಕೆ ವಿಶೇಷ ಆಯುಕ್ತ ಅಂಬು ಕುಮಾರ್, ಕೃಷಿ ಮಾರುಕಟ್ಟೆ ನಿರ್ದೇಶಕ ಕರೀಗೌಡ, ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ತಂಡದ ಸದಸ್ಯರಾಗಲಿದ್ದಾರೆ.
ಈ ತಂಡ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಎಪಿಎಂಸಿ ಸೇರಿದಂತೆ ಇತರೆ ಎಲ್ಲಾ ಮಾರುಕಟ್ಟೆಗಳಲ್ಲಿ ನಿಗಾ ವಹಿಸಬೇಕು. ಸಾಮಾಜಿಕ ಅಂತರ ಉಲ್ಲಂಘನೆ ಪುನರಾವರ್ತಿಸಿದರೆ ದಂಡದ ಕ್ರಮ ವಹಿಸಬೇಕು. ನಗರಾದ್ಯಂತ ಸಾರ್ವಜನಿಕ ಪ್ರಕಟಣೆಗಳನ್ನು ಮಾಡಬೇಕು.