ಬೆಂಗಳೂರು/ಚಾಮರಾಜನಗರ: ಆಮ್ಲಜನಕ ಕೊರತೆ ಹಾಗೂ ನಿಯಂತ್ರಣದಲ್ಲಿ ಸರ್ಕಾರ ಕಂಡಿರುವ ವೈಫಲ್ಯದ ವಿರುದ್ಧ ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಿದೆ.
ಕೋವಿಡ್ ನಿಯಂತ್ರಣದಲ್ಲಿ ಆದ ವೈಫಲ್ಯದಿಂದ ರಾಜ್ಯದಲ್ಲಿ ಸಾಕಷ್ಟು ಸಾವುಗಳು ಸಂಭವಿಸುತ್ತಿವೆ. ಈ ಮಧ್ಯೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮ್ಲಜನಕ ಪೂರೈಕೆಯಾಗದೆ ಆಸ್ಪತ್ರೆಯಲ್ಲಿ ರೋಗಿಗಳು ಅಸುನೀಗುತ್ತಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಸಾವುಗಳಿಗೆ ಕಾರಣ, ಸರ್ಕಾರ ಕೊಲೆಗಾರ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಸರ್ಕಾರ ಸಮರ್ಪಕವಾಗಿ ಲೆಕ್ಕ ಕೊಡುತ್ತಿಲ್ಲ:
ಆಮ್ಲಜನಕ ಕೊರತೆಯಿಂದಾಗಿ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ 24 ಮಂದಿ ಒಂದೇ ದಿನ ಅಸುನೀಗಿದ್ದಾರೆ. ಇಂದು ಕಲಬುರಗಿಯಲ್ಲಿ ನಾಲ್ವರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ. ಬೇಡಿಕೆಯ ಅರ್ಧದಷ್ಟು ಪೂರೈಕೆ ಸಹ ಆಗದಿರುವುದು ಜನರ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಸಾಕಷ್ಟು ಕೋವಿಡ್ ರೋಗಿಗಳು ಆಮ್ಲಜನಕ ಕೊರತೆಯಿಂದಾಗಿ ಅಸುನೀಗುತ್ತಿದ್ದು, ಸರ್ಕಾರ ಸಮರ್ಪಕವಾಗಿ ಲೆಕ್ಕ ಕೊಡುತ್ತಿಲ್ಲ ಎಂಬು ಕೈ ನಾಯಕರ ಆರೋಪವಾಗಿದೆ.
ಸಾವನ್ನು ಸಹ ಮುಚ್ಚಿಹಾಕುವ ದೊಡ್ಡಮಟ್ಟದ ಪ್ರಯತ್ನ:
ಚಾಮರಾಜನಗರದ ಸಾವನ್ನು ಸಹ ಮುಚ್ಚಿಹಾಕುವ ದೊಡ್ಡಮಟ್ಟದ ಪ್ರಯತ್ನವನ್ನು ಸರ್ಕಾರ ನಡೆಸಿತ್ತು. ಆದರೆ ಇದರ ವಿರುದ್ಧ ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳು ನಡೆಸಿದ ಹೋರಾಟದಿಂದಲೇ ಸತ್ಯ ಹೊರಬರಲು ಸಾಧ್ಯವಾಗಿದೆ. ಈಗಲೂ ಸರ್ಕಾರ ಸಮಸ್ಯೆಯಿಂದಾಗಿ ಹಲವರು ಸಾವನ್ನಪ್ಪಿದ್ದಾರೆ. ಆದ್ರೆ, ಸರ್ಕಾರ ಆಮ್ಲಜನಕ ಕೊರತೆಯಿಂದಾಗಿ ಕೇವಲ ಮೂರು-ನಾಲ್ಕು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ವರದಿ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಸತ್ಯ ಬಯಲಿಗೆ ಚಾಮರಾಜನಗರಕ್ಕೆ ಕಾಂಗ್ರೆಸ್ ನಾಯಕರು ಭೇಟಿ:
ಚಾಮರಾಜನಗರದಲ್ಲಿ 24 ಮಂದಿ ಸಾವನ್ನಪ್ಪಿರುವ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಇಂದು ಚಾಮರಾಜನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ನಾಯಕರು ತೆರಳಿದ್ದು ಮಾಹಿತಿ ಕಲೆಹಾಕಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ ಮತ್ತು ಆರೋಗ್ಯ ಸಚಿವರ ತಾತ್ಸಾರ:
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಮ್ಲಜನಕದ ಕೊರತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳ ವೈಫಲ್ಯ ಹಾಗೂ ಸರ್ಕಾರದ ನಿರ್ಲಕ್ಷ್ಯ ಮತ್ತು ಆರೋಗ್ಯ ಸಚಿವರ ತಾತ್ಸಾರ ಮನೋಭಾವವೇ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ.
ಸೋಮವಾರ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರೆ ಕಾಂಗ್ರೆಸ್ ನಾಯಕರು ಆಮ್ಲಜನಕ ಪೂರೈಕೆಗೆ ಒತ್ತಡ ಹೇರಿದ್ದರು.
ಸಾಕಷ್ಟು ಸಾವು-ನೋವುಗಳನ್ನು ತಡೆಯುವ ಕಾರ್ಯ ಆಗಬೇಕು ಎಂದು ಕಾಂಗ್ರೆಸ್ ಒತ್ತಡಕ್ಕೆ ಸರ್ಕಾರ ಮಣಿದು ವ್ಯವಸ್ಥೆ ಮಾಡಿತ್ತು. ರಾಜ್ಯದ ಹಲವೆಡೆ ಇದೇ ತರಹದ ಸಮಸ್ಯೆಗಳಿದ್ದು, ಎಲ್ಲಾ ಕಡೆ ಮಾಹಿತಿ ಕಲೆಹಾಕಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ವಿಶೇಷ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ:
ಇದರ ಭಾಗವಾಗಿಯೇ ಇಂದು ಚಾಮರಾಜನಗರಕ್ಕೆ ತೆರಳಿರುವ ರಾಜ್ಯ ಕಾಂಗ್ರೆಸ್ ನಾಯಕರು ನಾಳೆ ನಗರದಲ್ಲಿ ವಿಶೇಷ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಹೆಣೆಯಲು ನಿರ್ಧರಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಅಂತಹ ಜಿಲ್ಲೆಗಳಲ್ಲಿ ಆಮ್ಲಜನಕ ಪೂರೈಕೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ತಮ್ಮದೇ ಮೂಲಗಳಿಂದ ಮಾಹಿತಿ ಪಡೆಯಲು ತೀರ್ಮಾನಿಸಿದ್ದಾರೆ.
ಸರ್ಕಾರದ ವೈಫಲ್ಯವೇ ಕೈ ಹೋರಾಟದ ಅಸ್ತ್ರ:
ಆಮ್ಲಜನಕ ಕೊರತೆ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಆದ ಸರ್ಕಾರದ ವೈಫಲ್ಯವನ್ನು ಹೋರಾಟದ ಅಸ್ತ್ರವಾಗಿಸಿಕೊಂಡು ಜನರ ಪರ ನಿಲ್ಲಲು ಕಾಂಗ್ರೆಸ್ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಆಮ್ಲಜನಕ ಕೊರತೆ ಆಗದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲು ನಾಯಕರು ಸಜ್ಜಾಗುತ್ತಿದ್ದಾರೆ.
ಆಮ್ಲಜನಕ ಇರಿಸಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ:
ಈಗಾಗಲೇ ಕೇಂದ್ರ ಸರ್ಕಾರದಿಂದ ಸಹ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಸೂಕ್ತ ಪ್ರಮಾಣದ ಆಮ್ಲಜನಕ ಇರಿಸಿಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬೆಂಗಳೂರು ನಗರದಲ್ಲಿ ದಿನಕ್ಕೆ 300 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿದ್ದು, ಕೇವಲ 150 ಮೆಟ್ರಿಕ್ ಟನ್ ನಷ್ಟು ಮಾತ್ರ ಆಮ್ಲಜನಕ ಪೂರೈಕೆಯಾಗುತ್ತದೆ ಎಂದು ನೀಡಿರುವ ಮಾಹಿತಿಯನ್ನಾಧರಿಸಿ ಸಹ ಕಾಂಗ್ರೆಸ್ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತೀರ್ಮಾನ:
ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಯನ್ನು ಎಚ್ಚರಿಕೆಯಿಂದ ಗಮನಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಚಾಮರಾಜನಗರ ಘಟನೆ ಮುಂದಿಟ್ಟು ಆಮ್ಲಜನಕ ಕೊರತೆಯನ್ನು ಹಾಗೂ ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಚಾರವನ್ನು ಮುಂದಿಟ್ಟು ಹೋರಾಟಕ್ಕೆ ನಿರ್ಧರಿಸಿರುವ ಕಾಂಗ್ರೆಸ್ ನಾಯಕರನ್ನು ಸರ್ಕಾರ ಯಾವ ರೀತಿ ಎದುರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.