ಶಿವಮೊಗ್ಗ: ಪ್ರೀತಿಸಿದವನು ತನ್ನನ್ನು ಬಿಟ್ಟು ಬೇರೆ ಮದುವೆಯಾದನೆಂದು ನೊಂದ ಯುವತಿಯೊಬ್ಬಳು ಮದುವೆ ದಿನವೇ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಓ.ಟಿ.ರಸ್ತೆಯ ನಿವಾಸಿಯಾದ ರೂಪಶ್ರೀ ಇಂದು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಪಶ್ರೀ ಅವರು ಮುರುಳಿ ಎಂಬುವರನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಮುರುಳಿ ಇತ್ತೀಚೆಗೆ ಬೇರೆ ಯುವತಿಯ ಜೊತೆ ಮದುವೆ ಆಗಲು ಮುಂದಾಗಿದ್ದರು. ಇದರಿಂದ ರೂಪಶ್ರೀ ತೀವ್ರವಾಗಿ ನೊಂದಿದ್ದರು ಎನ್ನಲಾಗ್ತಿದೆ.
ಇಂದು ಮುರುಳಿ ತನ್ನ ಮನೆಯವರು ನಿಶ್ಚಯಿಸಿದ್ದ ಯುವತಿಯ ಜೊತೆ ಮದುವೆ ಆಗಿದ್ದಾರೆ. ಮದುವೆ ಸಮಾರಂಭ ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜರುಗಿತ್ತು. ಇತ್ತ ಮುರುಳಿ ಮದುವೆಯಾದ ಮೂಹೂರ್ತದ ಸಮಯಕ್ಕೆ ರೂಪಶ್ರೀ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಇದಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ರೂಪಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಮದುವೆ ಮನೆಯಿಂದಲೇ ಮುರಳಿ ಪರಾರಿಯಾಗಿದ್ದಾನೆ. ಸದ್ಯ ದೊಡ್ಡಪೇಟೆ ಪೊಲೀಸರು ಆತನ ಹುಡುಕಾಟದಲ್ಲಿ ಕಾರ್ಯನಿರತರಾಗಿದ್ದಾರೆ.
ವಧು ಸಹ ಆತ್ಮಹತ್ಯೆ ಯತ್ನ.. ಮುರುಳಿ ಮದುವೆಯಾದ ಯುವತಿಗೆ ಈ ವಿಚಾರ ತಿಳಿದು, ಆಕೆಯೂ ಸಹ ಸಮುದಾಯ ಭವನದಲ್ಲಿಯೇ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇಬ್ಬರು ಒಳ್ಳೆಯ ವಿದ್ಯಾವಂತರು.. ರೂಪಶ್ರೀ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ರು. ಪಿಹೆಚ್ಡಿ ಅಂತಿಮ ಹಂತಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕಾಲೇಜಿಗೆ ಹೋಗುತ್ತಿರಲಿಲ್ಲ. ಮುರುಳಿ ಸಹ ನಗರದ ಡಿವಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರಿಬ್ಬರು ಕಾಲೇಜು ದಿನಗಳಲ್ಲಿಯೇ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ರೂಪಶ್ರೀಗೆ ತಂದೆ-ತಾಯಿ ಹಾಗೂ ಒಬ್ಬ ತಮ್ಮನಿದ್ದಾನೆ. ತಂದೆ ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬಡ ಕುಟುಂಬವಾದ್ರೂ ಸಹ ಮಕ್ಕಳನ್ನು ಚೆನ್ನಾಗಿಯೇ ಸಾಕಿದ್ದರು. ಕಷ್ಟವಾದರು ಸಹ ಮಗಳು ಪಿಹೆಚ್ಡಿ ಪದವಿ ಪಡೆಯುತ್ತಿರುವುದು ಕುಟುಂಬಕ್ಕೆ ಸಂತೋಷವನ್ನುಂಟು ಮಾಡಿತ್ತು.
ಕಳೆದ ತಿಂಗಳು ಸಹ ವಿಷ ಸೇವಿಸಿದ್ದ ರೂಪ: ಕಳೆದ ತಿಂಗಳಲ್ಲೂ ಕೂಡ ರೂಪಶ್ರೀ ತನ್ನ ಮನೆಯಲ್ಲಿಯೇ ವಿಷ ಕುಡಿದಿದ್ದರು. ತಾನು ಓರ್ವನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಆಗುವುದಾಗಿ ಆ ವೇಳೆ ಹೇಳಿದ್ರು. ರೂಪಶ್ರೀ ಮನೆಯವರು ಮುರುಳಿ ಮನೆಯವರ ಬಳಿ ಹೋಗಿ ಮಾತನಾಡಿದಾಗ ಅವರಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿ ಕಳುಹಿಸಿದ್ದರಂತೆ.