ಶಿವಮೊಗ್ಗ: ಜೀತ ಪದ್ದತಿ ನಾಗರಿಕ ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ಅದನ್ನು ತೊಡೆದು ಹಾಕುವುದು ಅನಿವಾರ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಜೀತ ಪದ್ದತಿ ಕಾಯ್ದೆ ಕುರಿತು ಕ್ಷೇತ್ರ ಮಟ್ಟದ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಇಂದಿಗೂ ಅಲ್ಲಲ್ಲಿ ಕಂಡುಬರುವ ಜೀತದ ಪದ್ದತಿಯನ್ನು ಅಮೂಲಾಗ್ರವಾಗಿ ಕಿತ್ತೊಗೆಯಲು ಕಾನೂನುಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಜೀತ ಪದ್ದತಿ 13-14ನೇ ಶತಮಾನದಲ್ಲ್ಲಿ ಅಸ್ತಿತ್ವದಲ್ಲಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿತಿವಂತರು ಆರ್ಥಿಕವಾಗಿ ಹಿಂದುಳಿದವರನ್ನು ಅಡಿಯಾಳಾಗಿಟ್ಟುಕೊಂಡು ಜೀವನ ಪರ್ಯಂತ ದುಡಿಸಿಕೊಳ್ಳುತ್ತಿದ್ದರು. ಇದರೊಂದಿಗೆ ಮನೆಯ ಹಿರಿಯರೊಬ್ಬರು ಮಾಡಿದ ಸಾಲಕ್ಕಾಗಿ ಮನೆಮಂದಿಯೆಲ್ಲ ಜೀವನಪರ್ಯಂತ ಶೋಷಣೆಗೊಳಗಾಗುತ್ತಿದ್ದರು. ಕೆಲವೊಮ್ಮೆ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರಣಗಳು ಈ ಅನಿಷ್ಠ ಪದ್ಧತಿಯ ಜೀವಂತಿಕೆಗೆ ಕಾರಣವಾಗಿದ್ದವು. ಈ ಪದ್ದತಿ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಅಧಿಕಾರಿಗಳು ಗಮನಹರಿಸಿ, ನೊಂದವರಿಗೆ ಸಹಾಯಹಸ್ತ, ಕಾನೂನು ನೆರವು ನೀಡಿ ಜೀತ ಮುಕ್ತರನ್ನಾಗಿ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಜೀತ ಪದ್ದತಿಯಿಂದಾಗಿ ತಮ್ಮ ಭವಿಷ್ಯದ ಬದುಕನ್ನು ನಶಿಸಿಕೊಳ್ಳುತ್ತಿರುವ ಅಮಾಯಕರನ್ನು ಗುರುತಿಸಿ, ಅವರನ್ನು ಜೀತದಿಂದ ಮುಕ್ತಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು. ಮನೆಯ ಹಿರಿಯರು ಮಾಡಿದ ಸಾಲ ತೀರಿಸಲಾಗದೆ, ಹಳ್ಳಿಯ ಮುಖಂಡರ ಅಣತಿಯಂತೆ ಶೋಷಣೆಗೆ ಒಳಗಾಗಿ ಹಾಗೂ ಕೊಟ್ಟ ಮಾತಿನಂತೆ ನಡೆಯಬೇಕೆಂಬ ಆದರ್ಶಕ್ಕೆ ಅಂಟಿಕೊಂಡು ಹಗಲಿರುಳು ದುಡಿಯುತ್ತಿರುವವರನ್ನು ಗುರುತಿಸಿ, ಅವರಿಗೆ ಸುಂದರ ಬದುಕು ಕಟ್ಟಿಕೊಳ್ಳಲು ನಾಗರಿಕ ಸಮಾಜ ಅವಕಾಶ ಮಾಡಿಕೊಡಬೇಕು. ಜೀತ ಪದ್ದತಿ ಹಲವು ಮಗ್ಗಲುಗಳನ್ನು ಒಳಗೊಂಡಿದ್ದು, ಅದನ್ನು ಗುರುತಿಸುವ ಅಗತ್ಯವಿದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎಸ್.ಸರಸ್ವತಿ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಹಿರಿಯ ವಕೀಲ ಡಿ.ಎನ್.ಹಾಲಸಿದ್ಧಪ್ಪ ಮುಂತಾದವರು ಉಪಸ್ಥಿತರಿದ್ದರು.