ಶಿವಮೊಗ್ಗ: ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವ ಸೈನಿಕರು ಈಗ ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾದಂತಹ ದುಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿ ವೀರಮರಣ ಹೊಂದಿದ ಹಾಗೂ ನಿವೃತ್ತಿಯಾದವರಿಗೆ ಸರ್ಕಾರವು ಜೀವನೋಪಾಯಕ್ಕಾಗಿ ನೀಡಬೇಕಾದ ಭೂಮಿ ಇನ್ನೂ ಶೇ.99ರಷ್ಟು ಸೈನಿಕರ ಕೈಸೇರಿಲ್ಲ. ಹೀಗಾಗಿ ಕರ್ತವ್ಯದಲ್ಲಿದ್ದಾಗ ವೈರಿಗಳ ವಿರುದ್ಧ ಹೋರಾಡಿದ್ದ ಸೈನಿಕರು, ಇಂದು ತಮ್ಮ ಸೌಲಭ್ಯಗಳನ್ನು ಪಡೆಯಲು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹುಸಿಯಾದ ಭರವಸೆ.. ಸುಮಾರು 2 ದಶಕಗಳಿಂದಲೂ ಸರ್ಕಾರ ಮಾಜಿ ಸೈನಿಕರುಗಳಿಗೆ ಹುಸಿ ಭರವಸೆ ನೀಡುತ್ತಲೇ ಬರಲಾಗುತ್ತಿದೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ, ನಿವೃತ್ತರಾದರೆ ಸರ್ಕಾರದಿಂದ 4.18 ಎಕರೆ ಕೃಷಿ ಭೂಮಿ ನೀಡಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 1 ಸಾವಿರಕ್ಕೂ ಅಧಿಕ ಮಾಜಿ ಸೈನಿಕರು ಸೇರಿದಂತೆ ರಾಜ್ಯದಲ್ಲಿ ಸುಮಾರು 1.30 ಲಕ್ಷ ಮಾಜಿ ಸೈನಿಕರಿದ್ದು, 4 ಲಕ್ಷ ಸೈನಿಕ ಕುಟುಂಬಗಳಿವೆ. ಆದರೆ, ಕಳೆದ 2 ದಶಕದಿಂದ ಬಹುತೇಕರಿಗೆ ಸರ್ಕಾರದ ಭೂಮಿ ಸಿಕ್ಕಿಲ್ಲ. ಕಚೇರಿಗಳಿಗೆ ನಿರಂತರವಾಗಿ ಅಲೆದಾಡಿ ಭೂಮಿ ಮೇಲಿನ ಆಸೆಯನ್ನೇ ಮಾಜಿ ಸೈನಿಕರು ಬಿಡುವಂತಾಗಿದೆ.
ಮಾಜಿ ಸೈನಿಕರಿಗಾಗಿಯೇ ಈ ಹಿಂದೆ ರಾಜ್ಯಾದ್ಯಂತ ಭೂಮಿಯನ್ನು ಕಾಯ್ದಿರಿಸಲಾಗಿತ್ತು. ಆದರೆ, ಆ ಭೂಮಿಯನ್ನು ಸಹ ಪ್ರಭಾವಿಗಳು ಒತ್ತುವರಿ ಮಾಡಿದ್ದು, ಸರ್ಕಾರ ಸಹ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡಿದೆ. ಈ ಹಿಂದೆ ಮಾಜಿ ಸೈನಿಕರಿಗೆ ಗೋಮಾಳ, ಕಂದಾಯ ಭೂಮಿಯನ್ನೂ ನೀಡುವ ಅವಕಾಶ ಇತ್ತು. ಈಗ ಗೋಮಾಳ ನೀಡಲು ಬರುವುದಿಲ್ಲ ಎನ್ನುತ್ತಿದ್ದು, ಕಂದಾಯ ಭೂಮಿ ಲಭ್ಯವಿದ್ದರೂ ಮಾಜಿ ಸೈನಿಕರಿಗೆ ಕೊಡದೇ ಅಲೆದಾಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸೈನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹುತಾತ್ಮರ ಪತ್ನಿಯರಿಗೂ ಸಿಗದ ಸೌಲಭ್ಯ.. ಹುತಾತ್ಮರ ಪತ್ನಿಯರನ್ನು ಸರ್ಕಾರ ವೀರನಾರಿಯರೆಂದು ಗೌರವಿಸುತ್ತಿದ್ದು, ಅಂಥವರಿಗೂ ಜಮೀನು ಮಂಜೂರು ಮಾಡಿಲ್ಲ. ಕೇವಲ ಅರ್ಜಿ ಸಲ್ಲಿಸಿ, ಸರ್ಕಾರಿ ಕಚೇರಿಗೆ ಅಲೆದಾಡುವ ಮೂಲಕ ಮಾಜಿ ಸೈನಿಕರು ಹಾಗೂ ಅವರ ಕುಟುಂಬಸ್ಥರು ಸಂಕಷ್ಟ ಅನುಭವಿಸುವಂತಾಗಿದೆ. ಇನ್ನು, ಭೂಮಿ ಹಂಚಿಕೆ ಮಾತ್ರವಲ್ಲದೇ ಮಾಜಿ ಸೈನಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಂದಲೂ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಸೇವೆಯಲ್ಲಿ ಕರ್ನಾಟಕದ ಮೂಲ ನಿವಾಸಿಗಳಿಗೆ ಮಾತ್ರ ಸೈನಿಕ ಕೋಟಾದಡಿ ಉದ್ಯೋಗ ನೀಡಬೇಕು. ಮುಂಬಡ್ತಿ ನೀಡುವಾಗ ಮಾಜಿ ಸೈನಿಕರ ಸೈನ್ಯದ ಸೇವೆ ಪರಿಗಣಿಸಿ ಸೇವಾ ಜೇಷ್ಠತೆಯನ್ನು ನೀಡಬೇಕು. ಮಾಜಿ ಸೈನಿಕರ ಸೈನ್ಯ, ಸೇವೆಯ ಕೊನೆಯ ವೇತನ ಪರಿಗಣಿಸಿ ವೇತನ ಪರಿಷ್ಕರಣೆಯಾಗಬೇಕು. ಆದರೇ, ಇದ್ಯಾವುದು ಆಗುತ್ತಿಲ್ಲ. ಮಾಜಿ ಸೈನಿಕರ ಮಕ್ಕಳ ಶಿಕ್ಷಣದ ಮೀಸಲಾತಿ ವಿಚಾರದಲ್ಲೂ ಅನ್ಯಾಯ ಮಾಡಲಾಗುತ್ತಿದ್ದು, ಇದೇ ಕಾರಣಕ್ಕಾಗಿ ಮಾಜಿ ಸೈನಿಕರು ನಾಳೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಶೋಪಿಯಾನ್ನಲ್ಲಿ ಉಗ್ರನ ಹೊಡೆದುರುಳಿಸಿದ ಯೋಧರು: ಮುಂದುವರಿದ ಎನ್ಕೌಂಟರ್