ಶಿವಮೊಗ್ಗ: ಮಾರ್ಚ್ 1 ರಿಂದ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗ ಜಾರಿ ಹಾಗೂ ಎನ್ಪಿಎಸ್ ರದ್ದುಪಡಿಸಿ, ಒಪಿಎಸ್ ಯೋಜನೆಯನ್ನು ಜಾರಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ನ್ಯಾಯಯುತವಾದ ಬೇಡಿಕೆಗಳಾದ ವೇತನ ಭತ್ಯೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಫೆಬ್ರವರಿ 21 ರಂದು ನಡೆದ ರಾಜ್ಯ ಕಾರ್ಯಕಾರಿಣಿ ಮತ್ತು ವೃಂದ ಸಂಘಗಳ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ ರಾಜ್ಯದ ಸಮಸ್ತ ಅಧಿಕಾರಿ- ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ನಮ್ಮದು ನ್ಯಾಯಯುತವಾದ ಹಾಗೂ ಸರಳ ಬೇಡಿಕೆಯಾಗಿದೆ. ಈಗಾಗಲೇ ನಾವು ನಮ್ಮ ಬೇಡಿಕೆ ಹೋರಾಟದ ಕುರಿತು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವೆ. ಅಧಿಕಾರಿಗಳ ಮಟ್ಟದಲ್ಲಿ ನಮ್ಮ ಜೊತೆ ಮಾತನಾಡಿದ್ದಾರೆ. ಸೋಮವಾರ ಸಹ ನಮ್ಮ ಜೊತೆ ಮಾತನಾಡಲು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಕರೆದಿದ್ದಾರೆ. ನಾವು ಸೋಮವಾರವು ಸಹ ಹೋಗಿ ಮಾತನಾಡುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯುತ್ತದೆ. ಅವರು ಮಾತುಕತೆಗೆ ಎಷ್ಟು ಬಾರಿ ಕರೆದರು ಹೋಗಿ ಮಾತನಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.
ನಮ್ಮ ರಾಜ್ಯದ ಸರ್ಕಾರಿ ನೌಕರರು ಇತರೆ ರಾಜ್ಯಗಳಿಗಿಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ. 7ನೇ ವೇತನ ಆಯೋಗದ ವರದಿಯಂತೆ ನಮ್ಮ ವೇತನ ಶೇ 40 ರಷ್ಟು ಹೆಚ್ಚಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್ಘಡ್, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ರೀತಿಯಲ್ಲಿ ನಮ್ಮಲ್ಲೂ ಸಹ ಒಪಿಎಸ್ ಜಾರಿ ಮಾಡಬೇಕು ಎಂಬ ಬೇಡಿಕೆ ಇದೆ. ನಮ್ಮ ನೌಕರರ ಸಂಘದವರು ಯಾರು ಸಹ ಧಿಕ್ಕಾರ ಕೂಗಲ್ಲ, ಪ್ರತಿಭಟನೆ ಮಾಡಲ್ಲ, ನಮ್ಮ ಹಾಗೂ ಕುಟುಂಬದ ಭವಿಷ್ಯದ ದೃಷ್ಟಿಯಿಂದ ನಾವು ಕರ್ತವ್ಯಕ್ಕೆ ಗೈರಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ವೇತನ ಆಯೋಗದ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡುವ ಕುರಿತ ನಿರೀಕ್ಷೆ ಇತ್ತು. ಆದರೆ ಅಲ್ಲಿ ಘೋಷಣೆ ಮಾಡದೆ ನಮಗೆಲ್ಲಾ ನಿರಾಸೆಯನ್ನುಂಟು ಮಾಡಲಾಗಿದೆ. ಇದರಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಸಂಘ ಹಾಗೂ ನೌಕರರು ಅನೇಕ ಸಂದರ್ಭದಲ್ಲಿ ಸರ್ಕಾರದ ಜೊತೆ ಇದ್ದೇವೆ. ಸರ್ಕಾರ ನಮಗೆ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದೆ. ಆದರೆ ಇಂದು ನಮ್ಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದೇವೆ. ನಾವು ಸರ್ಕಾರದ ಮಕ್ಕಳು. ಇದರಿಂದ ಇಷ್ಟು ದಿನ ಸಮಾಧಾನದಿಂದ ಕಾದು ನೋಡಿದ್ವಿ, ಈಗ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಷಡಾಕ್ಷರಿ ಹೇಳಿದರು. ಈ ವೇಳೆ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಶಿಕ್ಷಕರ ಆತ್ಮಹತ್ಯೆಯನ್ನು ಸರ್ಕಾರಿ ಕೊಲೆ ಅನ್ನದೇ ಬೇರೇನು ಹೇಳಬೇಕು?: ಸಿದ್ದರಾಮಯ್ಯ ಕಿಡಿ