ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಕೆಲ ಲೋಪ - ದೋಷಗಳು ಕಂಡು ಬಂದಿದ್ದು, ಕೂಡಲೇ ಸರಿಪಡಿಸಿ ಕಾಮಗಾರಿ ಮುಂದುವರೆಸಬೇಕೆಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಅಣ್ಣಾ ಹಜಾರೆ ಹೋರಾಟ ಸಮಿತಿ ಒತ್ತಾಯಿಸಿದೆ.
ಶರಾವತಿ ನಗರದ ಆದಿಚುಂಚನಗಿರಿ ಶಾಲೆ ಮುಂಭಾಗದ ಶಾಲೆ ಕಾಂಪೌಂಡ್ ಅನ್ನು ಅವೈಜ್ಞಾನಿಕವಾಗಿ ಹಾಗೂ ಸ್ಮಾರ್ಟ್ ಸಿಟಿ ನಿಯಮಕ್ಕೆ ವಿರುದ್ಧವಾಗಿ ನಿರ್ಮಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರಸ್ತೆ ಪಕ್ಕದಲ್ಲಿ ಫುಟ್ ಪಾತ್ ಮಾಡುವ ಬದಲು ಚರಂಡಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಾಗರ ರಸ್ತೆಯ ಭದ್ರಾ ಮೇಲ್ದಂಡೆ ಯೋಜನಾ ಇಲಾಖೆ ಮುಂಭಾಗದಲ್ಲಿ ಬಾಕ್ಸ್ ಡ್ರೈನೇಜ್, ವಾಕಿಂಗ್ ಪಾತ್ ಹಾಗೂ ಸೈಕಲ್ ಟ್ರ‍್ಯಾಕ್ ಕಾಮಗಾರಿ ನಡೆಯುತ್ತಿದ್ದು, ಇಲ್ಲೂ ಸಹ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು.
ಕೂಡಲೆ ಅಕ್ರಮವಾಗಿ ಕಟ್ಟಿರುವಂತಹ ಕಟ್ಟಡಗಳನ್ನು ತೆರವುಗೊಳಿಸಿ ನಿಯಮಾನುಸಾರವಾಗಿ ಕಾಮಗಾರಿ ನಡೆಸಬೇಕು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ನೀಡುವ ಮೂಲಕ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು.