ಶಿವಮೊಗ್ಗ : ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ವೇಳೆ ಆಜಾನ್ ಕೂಗಿದ ವಿಡಿಯೋ ವೈರಲ್ ಆದ ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಆಜಾನ್ ಕುರಿತಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ವೇಳೆ ಯುವಕನೋರ್ವ ಆಜಾನ್ ಕೂಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಇದೇ ವೇಳೆ ಆಜಾನ್ ಕೂಗಿದ ಯುವಕನಿಗೆ ಸಮುದಾಯದ ಮುಖಂಡರು ಬೈದು ಬುದ್ದಿವಾದ ಹೇಳಿ ಕಳಿಸಿದ್ದರು. ಈ ರೀತಿ ಮಾಡದಂತೆ ಯುವಕನಿಗೆ ತಿಳಿಹೇಳಿದ್ದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ವಾಪಸ್ ಕಳುಹಿಸಿದ್ದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಆಜಾನ್ ಕೂಗಿದ ಘಟನೆಗೆ ಸಂಬಂಧ ಯುವಕನನ್ನು ಕರೆಯಿಸಿ, ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ. ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿ ಹಾಜರಿದ್ದವರ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದೆ. ಮಾಹಿತಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಭಾಷಣದ ಸಂದರ್ಭದಲ್ಲಿ ಆಜಾನ್ ಕೇಳಿ ಬಂದ ಕಾರಣ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಗಳೂರಿನ ಕಾವೂರು ಶಾಂತಿನಗರ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ವೇಳೆ ಈ ಘಟನೆ ನಡೆದಿತ್ತು. ಈಶ್ವರಪ್ಪನವರ ಈ ನಡೆ ಖಂಡಿಸಿ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು.
ಕುಮಾರಸ್ವಾಮಿ ಪ್ರತಿಕ್ರಿಯೆ : ಈ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, 'ಈ ರೀತಿಯ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವು ಸೂಕ್ಷ್ಮವಾದ ವಿಚಾರಗಳು. ರಾಜ್ಯದಲ್ಲಿ ಈ ರೀತಿಯ ಪ್ರಕರಣಕ್ಕೆ ಬಿಜೆಪಿಯೇ ಕಾರಣ. ನಮ್ಮ ರಾಜ್ಯ ಸರ್ವಜನಾಂಗೀಯ ತೋಟವಾಗಿರಬೇಕು. ತಪ್ಪು ಮಾಡಿದವರ ಮೇಲೆ ಸಂಪೂರ್ಣ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರಿನ ವಿಜಯಸಂಕಲ್ಪ ಯಾತ್ರೆಯಲ್ಲಿ ಆಝಾನ್ ವಿರುದ್ಧ ಅಸಮಾಧಾನಗೊಂಡ ಈಶ್ವರಪ್ಪ