ಶಿವಮೊಗ್ಗ: ಸರ್ಕಾರ ಆರ್ಥಿಕ ಕುಸಿತ ತಡೆದು ಜನರ ಜೀವನ ಮಟ್ಟವನ್ನು ಉತ್ತೇಜಿಸಲು ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಆರ್ಥಿಕ ಉತ್ತೇಜನಕ್ಕೆ ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಮಾಡದೆ ಇರುವ ಅಥವಾ ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳ ಅನುದಾನಕ್ಕೆ ಕಡಿತವನ್ನುಂಟು ಮಾಡುವ ಸಾಧ್ಯತೆಗಳು ಕಂಡು ಬಂದಿವೆ. ಆದರೂ ಸಹ ಸಿಎಂ ಶಿವಮೊಗ್ಗ ಜಿಲ್ಲೆಯವರೇ ಆಗಿರುವ ಕಾರಣ ಈ ವರ್ಷವು ಸಹ ಬಜೆಟ್ ಮೇಲೆ ಜನತೆಗೆ ಹೆಚ್ಚಿನ ನಿರೀಕ್ಷೆ ಇದೆ.
ಮುಂಬರುವ ಬಜೆಟ್ನಲ್ಲಿ ಜಿಲ್ಲೆಗೆ ಹಲವು ನಿರೀಕ್ಷೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸರ್ಕಾರ ಜನಪ್ರಿಯ ಯೋಜನೆಗಳನ್ನು ಕೈ ಬಿಟ್ಟು ಎಲ್ಲರಿಗೂ ಸಮಾನವಾಗಿರುವಂತಹ ಆರೋಗ್ಯ ಹಾಗೂ ಶಿಕ್ಷಣವನ್ನು ಉಚಿತವಾಗಿ ಸಿಗುವಂತೆ ಮಾಡಬೇಕು. ಜಿಲ್ಲೆಗೆ ಬಸ್ ಟರ್ಮಿನಲ್ ಸ್ಥಾಪನೆಯಾದ್ರೆ, ರಸ್ತೆ ಪಕ್ಕದಲ್ಲಿ ಬಸ್ಗಳು ನಿಲ್ಲುವುದು ತಪ್ಪುತ್ತದೆ. ಅದೇ ರೀತಿ ಟ್ರಕ್ ಟರ್ಮಿನಲ್ ಸಹ ಬೇಕಾಗಿದೆ.
ಎಪಿಎಂಸಿಯ ಅಂಗಡಿಗಳಿಗೆ ವಾಣಿಜ್ಯ ಉದ್ದೇಶದಷ್ಟು ತೆರಿಗೆ ಹಾಕಲಾಗುತ್ತಿದೆ. ಇದರಿಂದ ವಾಸಿಸುವ ಮನೆಗಿಂತ ಹೆಚ್ಚು ವಾಣಿಜ್ಯ ತೆರಿಗೆಕ್ಕಿಂತ ಕಡಿಮೆ ತೆರಿಗೆ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ ಕೈಗಾರಿಕಾ ವಸಾಹತುಗಳಿವೆ. ಆದರೆ ದೊಡ್ಡ ಪ್ರಮಾಣದ ಕೈಗಾರಿಕಾ ವಸಾಹತುಗಳಿಲ್ಲ. ಇದರಿಂದ ದೊಡ್ಡ ಮಟ್ಟದ ಕೈಗಾರಿಕೆಗಳು ಶಿವಮೊಗ್ಗಕ್ಕೆ ಬರುತ್ತಿಲ್ಲ. ಸದ್ಯ ಸೋಗಾನೆ ವಿಮಾನ ನಿಲ್ದಾಣದ ಬಳಿ 400 ಎಕರೆ ಜಾಗವಿದೆ. ಇಲ್ಲಿ ದೊಡ್ಡ ಕೈಗಾರಿಕೆಗಳಿಗೆ ಅವಕಾಶ ಮಾಡಿ ಕೊಟ್ಟರೆ, ಕೈಗಾರಿಕೆಗಳು ಸ್ಥಾಪನೆಯಾಗಿ ಸಾಕಷ್ಟು ಉದ್ಯೋಗವಕಾಶ ಸೃಷ್ಟಿಯಾಗುತ್ತದೆ ಎಂದು ಎಪಿಎಂಸಿ ಅಡಿಕೆ ಮಂಡಿ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಾರದ ಅನುಮತಿಯನ್ನು ಪ್ರತಿವರ್ಷ ಪಡೆಯದೆ, ಕನಿಷ್ಠ ಮೂರು ವರ್ಷಕ್ಕೊಮ್ಮೆ ಪಡೆಯುವಂತೆ ಮಾಡಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒಳ್ಳೆಯ ಅವಕಾಶವಿದೆ. ಆದರೆ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಬಗ್ಗೆ ತಿಳಿಸುವ ಹಾಗೂ ಪೂರಕವಾದ ಹೋಟೆಲ್ ಮ್ಯಾನೇಜ್‌ಮೆಂಟ್ ಅವಶ್ಯಕತೆ ಇದೆ. ಇದರಿಂದ ಶಿವಮೊಗ್ಗದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರಾರಂಭ ಮಾಡಬೇಕಿದೆ.
ಸದ್ಯ ಕೈಗಾರಿಕೆಗಳ ತೆರಿಗೆ ಶೇ. 9ರಷ್ಟಿದೆ. ಇದನ್ನು ಶೇ. 3ಕ್ಕೆ ಇಳಿಸಬೇಕು. ಕೈಗಾರಿಗಳ ಸ್ಥಾಪನೆಗೆ ಬೇಕಾದ ಭೂಮಿಯನ್ನು ಕೆಐಡಿಬಿಯಿಂದ ಖರೀದಿಸದೆ ರೈತರಿಂದಲೇ ನೇರವಾಗಿ ಕೈಗಾರಿಕೋದ್ಯಮಿಗಳು ಖರೀದಿಸುವಂತೆ ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕಿದೆ ಎಂದು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಯ ಜಿಲ್ಲಾಧ್ಯಕ್ಷ ವಾಸುದೇವ ಹೇಳಿದರು.