ಶಿವಮೊಗ್ಗ: ಪೋಷಕರು ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಮುನ್ನ ಎಚ್ಚರ ವಹಿಸಬೇಕು. ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಆಗಸ್ಟ್ 12 ರಂದು ಶಿವಮೊಗ್ಗ ಅಶೋಕ ಹೋಟೆಲ್ ಬಳಿ ವಾಹನಗಳ ತಪಾಸಣೆ ನಡೆಸುವಾಗ ಅಪ್ರಾಪ್ತ ಬೈಕ್ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು.
ತಪಾಸಣೆ ವೇಳೆ KA 14 Y 4001 ನೋಂದಣಿಯ ದ್ವಿಚಕ್ರ ವಾಹನವನ್ನು ಬಾಲಕ ಚಲಾಯಿಸಿಕೊಂಡು ಬಂದಿದ್ದ. ಅಪ್ರಾಪ್ತರು ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೇ ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡುವುದು ಕೂಡ ಅಪರಾಧವಾಗಿದೆ. ಈ ಬಗ್ಗೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸರು ವಾಹನದ ಮಾಲೀಕರಾದ ಕ್ಲಾರ್ಕ್ಪೇಟೆಯ ನಿವಾಸಿ ಓಂ ಪ್ರಕಾಶ್ ಎಂಬುವರ ವಿರುದ್ಧ ಲಘು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ಶಿವಮೊಗ್ಗದ 4 ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ. ದ್ವಿಚಕ್ರ ವಾಹನ ಮಾಲೀಕರಾದ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಮೂಲಕ ನ್ಯಾಯಾಲಯವು ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ.
ತೀರ್ಥಹಳ್ಳಿಯಲ್ಲೂ ನಡೆದಿತ್ತು ಇಂತಹದ್ದೇ ಪ್ರಕರಣ: ಶಿವಮೊಗ್ಗದ ತೀರ್ಥಹಳ್ಳಿಯಲ್ಲೂ ಸಹ ಕಳೆದ ವರ್ಷ ಇಂತಹದ್ದೇ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದಲ್ಲಿ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಬಳಿ 2022 ಅಕ್ಟೋಬರ್ನಲ್ಲಿ 16 ವರ್ಷದ ಬಾಲಕನೊಬ್ಬ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಹಾಗೂ ಚಾಲನಾ ಪರವಾನಗಿ ಇಲ್ಲದೆ ಚಲಾಯಿಸುತ್ತಿರುವುದನ್ನು ಪೊಲೀಸರು ಗಮನಿಸಿದ್ದರು.
ಬಳಿಕ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿತ್ತು. ಬೈಕ್ ಚಲಾಯಿಸಿದ ಬಾಲಕ ಹಾಗೂ ಆತನಿಗೆ ಬೈಕ್ ನೀಡಿದ ತಂದೆ ವಿರುದ್ಧ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ತೀರ್ಥಹಳ್ಳಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ದ್ವಿಚಕ್ರ ವಾಹನದ ಮಾಲೀಕರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದರು.
ಇದನ್ನೂ ಓದಿ: ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್