ಶಿವಮೊಗ್ಗ: ಈ ವರ್ಷ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆ ಮಳೆಯಾಗಿದೆ. ಆದರೂ ಸಹ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳು ಹಾಳಾಗಿದ್ದು, ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ನಗರದ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಜೀವವನ್ನು ಕೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ನಗರದಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ಅದರಲ್ಲೂ ಸ್ಮಾರ್ಟ್ ಸಿಟಿಯ ಅಭಿವೃದ್ಧಿ ನೆಪದಲ್ಲಿ ಸಾಕಷ್ಟು ರಸ್ತೆಗಳನ್ನು ಅಗೆದು ಹಾಗೇ ಬಿಡಲಾಗಿದೆ. ಇದರಿಂದ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
2019 ರಲ್ಲಿ ಶಿವಮೊಗ್ಗ ನಗರದಲ್ಲಿ 129 ಕಿ.ಮಿ ರಸ್ತೆ ಹಾಳಾಗಿತ್ತು. ಇದರ ದುರಸ್ತಿಗಾಗಿ ಸರ್ಕಾರ 55 ಕೋಟಿ ಹಣ ಬಿಡುಗಡೆ ಮಾಡಿತ್ತು. ಇನ್ನೂ ಸರ್ಕಾರಿ ಕಟ್ಟಡ ಹಾಗೂ ಸರ್ಕಾರಿ ಶಾಲೆಗಳ ದುರಸ್ತಿಗೆ 11.50 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವುದು, ಅಲ್ಲದೆ ತುರ್ತು ಕಾಮಗಾರಿಗೆ ಎಸ್ಡಿಆರ್ಎಫ್ ಫಂಡ್ ಬಳಸಿ ಕೊಳ್ಳಬಹುದಾಗಿದೆ. ಸರ್ಕಾರಿ ಕಟ್ಟಡ ದುರಸ್ತಿಗೆ 2 ಲಕ್ಷ ರೂ ಬಿಡುಗಡೆಯಾಗಿದೆ. ಕುಡಿಯುವ ನೀರಿಗೆ 1.5 ಲಕ್ಷ ರೂ ನಿಗದಿ ಮಾಡಿದೆ. ಹಿಂದಿನ ವರ್ಷದ ಎಲ್ಲಾ ಕಾಮಗಾರಿ ಮುಗಿದಿದ್ದು, ಈ ವರ್ಷದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ರಸ್ತೆ ಹಾಳಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದ್ದು, ಅನುಮೋದನೆ ಸಿಕ್ಕ ನಂತರ ರಸ್ತೆ ದುರಸ್ತಿ ಕಾರ್ಯ ಪ್ರಾರಂಭ ಮಾಡಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಚಿದಾನಂದ ವಾಟರೆಯವರು ತಿಳಿಸಿದ್ದಾರೆ.
ಇನ್ನೂ ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ವರ್ಷದಲ್ಲಿ 50 ಕೋಟಿಗೂ ಅಧಿಕ ಹಣ ರಸ್ತೆ ದುರಸ್ತಿ, ರಸ್ತೆ ಮರು ನಿರ್ಮಾಣಕ್ಕೆ ನೀಡಲಾಗಿದೆ. ಕಳೆದ ವರ್ಷ 75 ಕಾಮಗಾರಿಗಳಲ್ಲಿ 74 ಕಾಮಗಾರಿ ಪೂರ್ಣಗೊಂಡಿದ್ದು, 1 ಕಾಮಗಾರಿ ಮಾತ್ರ ಉಳಿದುಕೊಂಡಿದೆ. ಸದ್ಯ ಜಿಲ್ಲೆಯಲ್ಲಿ 30 ಕಿ.ಮೀ ರಸ್ತೆ ಹಾಳಾಗಿದೆ. ಇದಕ್ಕೆ 22 ಕೋಟಿ ರೂಪಾಯಿ ಅವಶ್ಯಕತೆಯಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಅನುಮೋದನೆ ಕಳುಹಿಸಲಾಗಿದೆ.