ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರ ವರ್ಗಾವಣೆ ಸರ್ಕಾರದ ತೀರ್ಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಷಡಾಕ್ಷರಿ ಅವರ ಮೇಲೆ ಕೆರೆ ಮಣ್ಣು ತೆಗೆದಿರುವ ಆರೋಪದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇದನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇದರ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ನಾನು ಸರ್ಕಾರದಲ್ಲಿ ಇದ್ದೇನೆಯೇ ಇಲ್ಲವೋ ಅಂತಾ ಹೇಳುವುದಕ್ಕೆ ಆಗುತ್ತದೆಯೇ. ಅದೇನು ದೊಡ್ಡ ವಿಷಯವೇನಲ್ಲ ಎಂದರು. ಪರೀಕ್ಷೆ ಹಗರಣದಲ್ಲಿ ಆರ್ ಡಿ ಪಾಟೀಲ ಪರಾರಿಯಾಗಿರುವ ಕುರಿತು ಮಾತನಾಡಿದ ಅವರು, ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೊನೆಗೆ ಕಾನೂನು ಗೆಲ್ಲಬೇಕು ಎಂದರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದೇ ನನ್ನ ಅಭಿಪ್ರಾಯ ಎಂದರು. ಕಿಯೋನಿಕ್ಸ್ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೇಳಿ ಬಂದಿದೆ. ಈ ಕುರಿತು ಬಿಜೆಪಿ ಅವರು ತನಿಖೆಗೆ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ: ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲ್ಲ, ಉಸ್ತುವಾರಿ ಸಚಿವರು ಯಾರು ಗೊತ್ತಿಲ್ಲ ಎಂಬ ಗೋಪಾಲಕೃಷ್ಣ ಬೇಳೂರು ಅವರ ಆರೋಪಕ್ಕೆ ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದು ಹೇಳಿದರು.
ಶರಾವತಿ ಸಂತ್ರಸ್ಥರ ಸಮಸ್ಯೆ ವಿಚಾರ: ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಪರಿಹರಿಸಲು ಪ್ರಯತ್ನ ನಡೆಸಿದ್ದೇನೆ. ಅದನ್ನು ಪರಿಹರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎತ್ತಂಗಡಿ, ಕೋಲಾರಕ್ಕೆ ವರ್ಗ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ವರ್ಗಾವಣೆ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಕ್ಷರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ, ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡಗಳು ವಿಭಾಗ) ಆದೇಶಿಸಿದ್ದಾರೆ.
ಈ ವಿಚಾರ ಈಗ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಇದು ಸರ್ಕಾರದ ನಿರ್ಧಾರ ಎಂದಿದ್ದಾರೆ.