ಶಿವಮೊಗ್ಗ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವ ಕೆಎಸ್ ಈಶ್ವರಪ್ಪರಿಗೆ ಕ್ಲೀನ್ ಚಿಟ್ ನೀಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದ ಕೆಲಸ ಮಾಡಲು ಇಂದಿನ ನ್ಯಾಯಾಲಯದ ತೀರ್ಪು ಪ್ರೇರಣೆ ಕೊಟ್ಟಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಚೌಡೇಶ್ವರಿ ನನ್ನನ್ನು ಇವತ್ತು ನಿರ್ದೋಷಿ ಅಂತ ಹೇಳಿ ನ್ಯಾಯ ಕೊಟ್ಟಿದ್ದಾಳೆ. ನನ್ನಲ್ಲಿ ಮತ್ತಷ್ಟು ಆ ದೈವ ಭಕ್ತಿ ನನಗೆ ಹೆಚ್ಚಿಗೆ ಆಗಲು ಅವಕಾಶ ಆಯಿತು. ಆ ತಾಯಿಯ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದ ಕೆಲಸವನ್ನು ಹೆಚ್ಚು ಮಾಡಲು ಇವತ್ತಿನ ನ್ಯಾಯಾಲಯದ ತೀರ್ಪು ಸ್ಪೂರ್ತಿ ಆಗಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಕೆಎಸ್ ಈಶ್ವರಪ್ಪನವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಂಬಿದ ಮನೆ ದೇವ್ರು ಚೌಡೇಶ್ವರಿ ನ್ಯಾಯ ಕೊಟ್ಟಿದ್ದಾಳೆ. ದೈವಭಕ್ತನಾದ ನನಗೆ ಮತ್ತಷ್ಟು ದೇವರ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದರು.
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು: ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈಶ್ವರಪ್ಪ ನಿರ್ದೋಷಿ ಎಂದು ತೀರ್ಪು ಬರುತ್ತಿದಂತೆ ಶಾಸಕ ಚನ್ನಬಸಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಬಿ ರಿಪೋರ್ಟ್ ಅಂಗೀಕಾರ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ನ್ಯಾಯಾಲಯ ಬಿ ರಿಪೋರ್ಟ್ ಅಂಗೀಕರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಇಲ್ಲವೆಂದು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಬೆಳಗಾವಿ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ 4 ಕೋಟಿ ರೂಪಾಯಿ ವೆಚ್ಚದ 108 ಕಾಮಗಾರಿಗಳನ್ನು ಮಾಡಿಸಿದ್ದರು. ಬಿಲ್ ಮಂಜೂರಾತಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಸೇರಿ ಗೃಹ ಸಚಿವರಿಗೆ ಸಂತೋಷ್ ಪತ್ರ ಬರೆದಿದ್ದರು. ಇದಾದ ಬಳಿಕ ಈಶ್ವರಪ್ಪನವರು ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬಳಿಕ ಸಂತೋಷ್ ಉಡುಪಿಯ ಖಾಸಗಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದ ಮೃತ ಸಂತೋಷ್ ಪತ್ನಿ: "ಕೇವಲ 15 ದಿನದಲ್ಲೇ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದರು. ಅಲ್ಲದೇ ಅವರು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಪ್ರಕರಣದ ಪ್ರತಿಹಂತದ ತನಿಖೆಯನ್ನೂ ಸೋರಿಕೆ ಮಾಡಿ ಈಶ್ವರಪ್ಪನವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಸ್ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ಇದರಿಂದಾಗಿಯೇ ಈಶ್ವರಪ್ಪ ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ. ಈಶ್ವರಪ್ಪರ ಮಾತುಗಳನ್ನು ಗಮನಿಸಿದರೆ ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ ಎಂದೆನಿಸುತ್ತಿದೆ. ಹೀಗಾಗಿ ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಬೇಕು" ಎಂದು ಈ ಹಿಂದೆ ಮೃತ ಸಂತೋಷ್ ಪತ್ನಿ ರೇಣುಕಾ ಪಾಟೀಲ್ ರಾಜ್ಯಪಾಲರಿಗೆ ಮನವಿ ಮಾಡಿದ್ದರು.
ಓದಿ: ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್ ನಾಯಕರ ವಾಗ್ದಾಳಿ