ಶಿವಮೊಗ್ಗ: ರೌಡಿ ಶೀಟರ್ ಮಾರ್ಕೇಟ್ ಗೋವಿಂದನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ಸೀತಾರಾಮ ಎಸ್.ಕೆ. ಅಲಿಯಾಸ್ ಖರಾಬ್ ಶಿವು ಹಾಗೂ ಆತನ ಸಹಚರರನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಶಿವಮೊಗ್ಗ ಗಾರ್ಡನ್ ಪ್ರದೇಶದ ಬಳಿಯೇ ಗೋವಿಂದನನ್ನು ಖರಾಬ್ ಶಿವು ಹಾಗೂ ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಠಾಣೆ ಪೊಲೀಸರು, ತನಿಖೆ ಆರಂಭಿಸಿದಾಗ ಖರಾಬ್ ಶಿವು ಹಾಗೂ ಆತನ ಸಹಚರರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗೋವಿಂದನ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.
ಗೋವಿಂದನ ಕೊಲೆ ಮಾಡಿದ್ದ ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ಸೀತಾರಾಮ ಅಲಿಯಾಸ್ ಖರಾಬ್ ಶಿವು, ನಾಗರಾಜ್ ಅಲಿಯಾಸ್ ನಾಗಿ, ಸುಬ್ರಹ್ಮಣಿ ಅಲಿಯಾಸ್ ಸುಬ್ಬು ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಹಿಂದೆ ಪ್ರಕರಣದ ಇತರೆ ಆರೋಪಿಗಳಾದ ಚೇತನ್, ಸಂಜಯ್, ಮಂಜುನಾಥ್, ರಿಜ್ವಾನ್, ಸಂದೇಶ್, ಪ್ರೇಮರಾಜ್, ಶಿವರಾಜ್, ಲಕ್ಷ್ಮಮ್ಮ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.