ಶಿವಮೊಗ್ಗ: ರಿಪ್ಪನಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಜನ ಹೈರಣಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈ ಕೊಡುವುದು ಸಾಮಾನ್ಯ. ಆದ್ರೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಜನರಷ್ಟೆ ಅಲ್ಲ ವೈದ್ಯರು ಸಹ ಪರದಾಡುವಂತಾಗಿದೆ. ಕಳೆದ ಸೋಮವಾರ ರಾತ್ರಿ ಶವ ಪರೀಕ್ಷೆ ನಡೆಸುವಾಗ ವಿದ್ಯುತ್ ಕೈ ಕೊಟ್ಟಿತ್ತು. ಇದರಿಂದ ಶವಗಾರದಲ್ಲಿ ಶವ ಪರೀಕ್ಷೆ ನಡೆಸುವ ವೈದ್ಯರು ಲೈಟ್ ಹೆಲ್ಮೆಟ್ ಅಥವಾ ಹೆಡ್ ಲ್ಯಾಂಪ್ ಫ್ಲ್ಯಾಶ್ ಲೈಟ್ ಸಹಾಯದಿಂದ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಗುರುಮಠ ಗ್ರಾಮದ ಲೋಕೇಶಪ್ಪ (68) ಎಂಬುವರು ತಮ್ಮ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದರು. ಲೋಕೇಶಪ್ಪ ಮೊಮ್ಮಗನ ಜೊತೆ ತಮ್ಮ ಜಮೀನಿಗೆ ಹೋಗಿದ್ದಾರೆ. ಜಮೀನಿಗೆ ಹೋದ ನಂತರ ತಮ್ಮ ಮೊಮ್ಮಗನಿಗೆ ಮನೆಗೆ ಹೋಗಲು ತಿಳಿಸಿ ತಾವು ಅಲ್ಲಿಯೇ ಉಳಿದುಕೊಂಡಿದ್ದರು. ಆದರೆ ಮಧ್ಯಾಹ್ನವಾದರೂ ಮನೆಗೆ ಲೋಕೇಶಪ್ಪ ಬಾರದ ಕಾರಣ, ಲೋಕೇಶಪ್ಪನವರ ಮಕ್ಕಳು ಹುಡುಕಿಕೊಂಡು ಹೋದಾಗ ಲೋಕೇಶಪ್ಪ ಶವವಾಗಿ ಪತ್ತೆಯಾಗಿದ್ದರು.
ಇವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಕುಟುಂಬಸ್ಥರು ರಿಪ್ಪನಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಎಂಎಲ್ಸಿ ಕೇಸ್ ಮಾಡಿಸಿ ಮೃತ ದೇಹವನ್ನು ಶವಪರೀಕ್ಷೆಗೆಂದು ತೆಗೆದುಕೊಂಡು ಹೋದಾಗ ರಾತ್ರಿಯಾಗಿತ್ತು. ಈ ವೇಳೆ ವಿದ್ಯುತ್ ಸಮಸ್ಯೆಯಿಂದ ವೈದ್ಯರು ಲೈಟ್ ಹೆಲ್ಮೆಟ್ ಹಾಗೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶವ ಪರೀಕ್ಷೆ ನಡೆಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದು ರಿಪ್ಪನಪೇಟೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೊಸನಗರ ತಾಲೂಕಿನ ರಿಪ್ಪನಪೇಟೆ ಗ್ರಾಮ ಒಂದು ಹೋಬಳಿ. ಇದು ಮಲೆನಾಡು ಕರಾವಳಿ ಸಂಪರ್ಕಿಸುವ ಪ್ರಮುಖ ಗ್ರಾಮವಾಗಿದೆ. ಇಲ್ಲಿನ ಆಸ್ಪತ್ರೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಜನ ತಮ್ಮ ಆರೋಗ್ಯದ ಸಮಸ್ಯೆಗಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿ ವೈದ್ಯಕೀಯ ತೊಂದ್ರೆ ಜೊತೆಗೆ ವಿದ್ಯುತ್ ಸಮಸ್ಯೆ ಸಹ ಇದೆ. ರಾತ್ರಿ ವೇಳೆ ಮೃತರಾದವರನ್ನು ಶವಗಾರಕ್ಕೆ ತರುತ್ತಾರೆ. ವಿದ್ಯುತ್ ಇಲ್ಲದ ಕಾರಣ ಜನ ಇಲ್ಲಿಗೆ ಬರಲು ಭಯ ಬೀಳುತ್ತಾರೆ. ಇದರಿಂದ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅವರು, ಮೆಸ್ಕಾಂರವರು ಹಾಗೂ ಆರೋಗ್ಯ ಇಲಾಖೆರವರು ಸೂಕ್ತ ಗಮನ ಹರಿಸಬೇಕೆಂದು ಹೋರಾಟಗಾರರಾದ ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಆರೋಗ್ಯ ಅಧಿಕಾರಿ ಸ್ಪಷ್ಟನೆ ಹೀಗಿದೆ: ಇನ್ನೂ ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರು, ಸೋಮವಾರ ರಾತ್ರಿ ಸುಮಾರು 8:30 ಕ್ಕೆ ಶವದ ಪರೀಕ್ಷೆ ನಡೆಸಬೇಕೆಂದು ಸಂಬಂಧಿಕರ ಒತ್ತಾಯ ಮಾಡಿದ್ದಾರೆ ಹಾಗೂ ಪೊಲೀಸರು ಹೇಳಿದ ಮೇರೆಗೆ ವೈದ್ಯರು ಶವ ಪರೀಕ್ಷೆ ನಡೆಸಿದ್ದಾರೆ. ಮೊಬೈಲ್ ಟಾರ್ಚ್ ನಲ್ಲಿ ಶವದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅದಕ್ಕೆ ಬೆಳಕು ಬೇಕಾಗುತ್ತದೆ. ಅದರಂತೆ ಲೈಟ್ ಹೆಲ್ಮೆಟ್ ಬೆಳಕಿನಲ್ಲಿ ಶವದ ಪರೀಕ್ಷೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಆಸ್ಪತ್ರೆಯಲ್ಲಿ ವಿದ್ಯುತ್ ಇದೆ, ಶವಗಾರದಲ್ಲಿ ಇರಲಿಲ್ಲ. ಇದು ಮೊದಲಿನಿಂದಲೂ ಸಮಸ್ಯೆ ಇದೆ. ಆದರೆ, ಅಲ್ಲಿನ ವೈದ್ಯರು ಜನರೇಟರ್ ಬಳಸಿಕೊಳ್ಳಬಹುದಾಗಿತ್ತು. ಅಲ್ಲದೇ, ಶವದ ಪರೀಕ್ಷೆ ಬೆಳಗ್ಗೆಯೇ ಮಾಡಬಹುದಾಗಿತ್ತು. ಈ ಕುರಿತು ತಾಲೂಕು ವೈದಾಧಿಕಾರಿಗಳಿಗೆ ವರದಿ ನೀಡಲು ತಿಳಿಸಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಗು ಜನಿಸಿದ ಖುಷಿಗೆ ಪಾರ್ಟಿ: ಸಂಭ್ರಮದಲ್ಲಿ ಕಾಂಗ್ರೆಸ್‌ಗೆ ಬೈದಿದ್ದಕ್ಕೆ ಸ್ನೇಹಿತರಿಂದಲೇ ಹಲ್ಲೆ
ಇದನ್ನೂ ಓದಿ: ಕಾಡಿಗೆ ಬೆಂಕಿ ಹಚ್ಚಿ ಕಾಡ್ಗಿಚ್ಚೆಂದು ಬಿಂಬಿಸಲಾಗ್ತಿದೆ: ಲೋಕಾಯುಕ್ತರಿಗೆ ದೂರು ನೀಡಿದ ಯುವಕ