ಶಿವಮೊಗ್ಗ: ಶಿಕ್ಷಣ ಇಲಾಖೆಯ ಮಾಹಿತಿ ಪೋಸ್ಟರ್‌ಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾಹಿತಿ ನೀಡಿರುವ ಇಲಾಖೆ ಆಯುಕ್ತ ಐಎಎಸ್ ಅಧಿಕಾರಿ ಉಮಾಶಂಕರ್ ಹಾಗೂ ಮುದ್ರಿಸಿದ ಸಿಎಂಸಿ ಖಾಸಗಿ ಸಂಸ್ಥೆಯ ವಿರುದ್ದ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ರಾಜ್ಯ ಸರ್ಕಾರ ತಕ್ಷಣ ಉಮಾಶಂಕರ್ರನ್ನು ವಜಾ ಮಾಡಬೇಕು ಹಾಗೂ ಸಿಎಂಸಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸಂವಿಧಾನ ರಚನಾ ಸಮಿತಿಯಲ್ಲಿ ಅಂಬೇಡ್ಕರ್ರವರು ಕೇವಲ ಅಧ್ಯಕ್ಷರಾಗಿದ್ದರು. ಕರಡು ಸಮಿತಿಯ ಬೇರೆ ಸದಸ್ಯರು ಸಿದ್ದಪಡಿಸಿದ ಸಂವಿಧಾನದ ಅಂತಿಮ ಕರಡನ್ನು ಮಾತ್ರ ಅಂಬೇಡ್ಕರ್ ತಯಾರಿಸಿದ್ದು ಎಂದು ತಪ್ಪು ಮಾಹಿತಿ ನೀಡಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಮೇಲಾಧಿಕಾರಿಗಳ ಹಾಗೂ ಸಚಿವರ ಗಮನಕ್ಕೆ ಬಾರದೆ ಸುತ್ತೂಲೆಯನ್ನು ಹೊರಡಿಸಿರುವುದು ಖಂಡನೀಯ. ಸಂವಿಧಾನ ರಚನೆಗಾಗಿ ವಿವಿಧ ದೇಶಗಳನ್ನು ಸುತ್ತಿ ಪ್ರಪಂಚದ ಅತಿ ಶ್ರೇಷ್ಟ ಸಂವಿಧಾನ ರಚನೆ ಮಾಡಿ ಕೊಟ್ಟ ಅಂಬೇಡ್ಕರ್ರವರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಮೂರ್ತಿ, ತಿಮ್ಲಾಪುರ ಲೋಕೇಶ್, ಎ.ಕೆ.ಮಹಾದೇವಪ್ಪ, ಬೀರನಕೆರೆ ಮಂಜಣ್ಣ ಸೇರಿ ಇತರರು ಹಾಜರಿದ್ದರು.