ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್ ಆಡಳಿತ ಮಂಡಳಿ ಕೊನೆಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಮಣಿದಿದೆ. ಹೋರಾಟದ ಫಲವಾಗಿ ಎಫ್‌ಎಸ್ ಮತ್ತು ಹೆಚ್ಟಿಎಸ್ನ 105 ಗುತ್ತಿಗೆ ಕಾರ್ಮಿಕರಿಗೆ ಸೋಮವಾರದಿಂದ ತಿಂಗಳಿಗೆ 13 ದಿನ ಕೆಲಸ ಸಿಗಲಿದೆ.
ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದ 105 ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹಿಂದೆ ಮಾತು ಕೊಟ್ಟಂತೆ ತಿಂಗಳಲ್ಲಿ 15 ದಿನ ಕೆಲಸ ನೀಡಬೇಕೆಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಮೊದಲ ದಿನ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿತ್ತು.
ಹೀಗಾಗಿಯೂ ಆಡಳಿತ ಮಂಡಳಿ ಕಾರ್ಮಿಕರ ಹೋರಾಟಕ್ಕೆ ಮಣಿದಿರಲಿಲ್ಲ. ಆದ್ದರಿಂದ ಕಾರ್ಖಾನೆಯ ನಾಲ್ಕು ಗೇಟ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಸಂಗಮೇಶ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ, ಬಿಜೆಪಿಯ ಧರ್ಮಪ್ರಸಾದ್ ಸೇರಿದಂತೆ ವಿವಿಧ ಕಾರ್ಮಿಕರ ಸಂಘಗಳು ಬೆಂಬಲ ಸೂಚಿಸಿದ್ದವು.