ಶಿವಮೊಗ್ಗ: ತಮ್ಮ ಮನೆಗಳನ್ನು ಯಾವುದೇ ಮಾಹಿತಿ ನೀಡದೇ ತೆರವುಗೊಳಿಸಿರುವುದನ್ನು ವಿರೋಧಿಸಿ ಮತ್ತು ಬದಲಿ ಮನೆಗಳನ್ನು ನೀಡುವಂತೆ ಆಗ್ರಹಿಸಿ ವಿರುಪಿನಕೊಪ್ಪದ ಹಸಿರುಗಿಡ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕೋಟೆಗಂಗೂರು ಗ್ರಾಪಂ ವ್ಯಾಪ್ತಿಯಲ್ಲಿರುವ ವಿರುಪಿನಕೊಪ್ಪದ ಹಸಿರುಗಿಡ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಗ್ರಾಮ ಪಂಚಾಯಿತಿ ಆದೇಶದ ಮೇರೆಗೆ ನಾವು ವಾಸವಾಗಿದ್ದೇವೆ. ಗ್ರಾಮ ಪಂಚಾಯತ್ ನಮ್ಮ ಗ್ರಾಮದ ಎಲ್ಲರಿಗೂ ಕಾಯಂ ನಿವೇಶನ ನೀಡಲು ಯೋಜನೆ ರೂಪಿಸಿದ್ದು, ಕೆಲವು ಕುಟುಂಬಗಳಿಗೆ ಕಂದಾಯ ಕಾಯ್ದೆಯ ಅನ್ವಯ ಹಕ್ಕು ಪತ್ರವನ್ನು ನೀಡಲಾಗಿದೆ. ಎಲ್ಲ ಸೌಲಭ್ಯ ಕೊಟ್ಟಿದ್ದಾರೆ. ಆದರೀಗ ಯಾವ ಮುನ್ಸೂಚನೆ ಇಲ್ಲದೆ, ಮಾಹಿತಿ ನೀಡದೇ ತೆರವುಗೊಳಿಸಲು ಹೊರಟಿದ್ದಾರೆಂದು ಪ್ರತಿಭಟನಾಕಾರರು ದೂರಿದರು.
ತಹಶೀಲ್ದಾರ್ ಮತ್ತು ಕಮೀಷನರ್ ಈಗ ನಮ್ಮ ಮನೆಗಳನ್ನು ತೆರವುಗೊಳಿಸಿದ್ದಾರೆ. ಇದು ಸಾಮಾಜಿಕ ಅನ್ಯಾಯವಾಗಿದ್ದು, ನಮಗೆ ನ್ಯಾಯ ಬೇಕು. ಕೊನೆಪಕ್ಷ ನಿವೇಶನ, ಸೂರು ಕಳೆದುಕೊಂಡ ನಮಗೆ ಬೊಮ್ಮನಕಟ್ಟೆ ಅಥವಾ ಮುದ್ದಿನಕೊಪ್ಪದ ಆಶ್ರಯ ಬಡಾವಣೆಗಳಲ್ಲಿ ಶಾಶ್ವತವಾಗಿ ಇಲ್ಲವೇ ತಾತ್ಕಾಲಿಕವಾಗಿಯಾದರೂ ನಿವೇಶನ ನೀಡುವಂತೆ ಆಗ್ರಹಿಸಿದರು.