ಶಿವಮೊಗ್ಗ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೇಂದ್ರದಲ್ಲಿ ಸೆ.21 ರಿಂದ 30 ರವರೆಗೆ ಕರ್ನಾಟಕ ಮುಕ್ತ ಶಾಲೆ ಕೆಒಎಸ್ ಪರೀಕ್ಷೆ ನಡೆಯುತ್ತಿದ್ದು, ಈ ವೇಳೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಡಿಸಿ ಕೆಬಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ನಡೆಸುತ್ತಿರುವ ಕೆಒಎಸ್ ಪರೀಕ್ಷಾ ದಿನಗಳಲ್ಲಿ ಬೆಳಿಗ್ಗೆ 7.30 ರಿಂದ ಸಂಜೆ 5.30ರವರೆಗೆ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಟೈಪಿಂಗ್, ಜೆರಾಕ್ಸ್ ಅಂಗಡಿಗಳು ರಾತ್ರಿ 10.00 ಗಂಟೆಗಳ ನಂತರ ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳೊಳಗೆ ಪ್ರವೇಶಿಸುವುದು, ನಿರ್ಬಂಧಿತ ಪ್ರದೇಶದ ಸುತ್ತಮುತ್ತಲಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನರು ಸೇರುವುದು ಸೇರಿದಂತೆ ಮೊಬೈಲ್ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ ನೀಡಿದ್ದಾರೆ.
ಯಾರಾದರೂ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯೊಳಗೆ ಪ್ರವೇಶಿಸಿದರೆ ಅಥವಾ ಪ್ರವೇಶಿಸಲು ಯತ್ನಿಸಿದರೆ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಪೊಲೀಸರ ವಶಕ್ಕೆ ಒಪ್ಪಿಸಿ ಕೂಡಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.