ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ ಆ.11ರಿಂದ ವಿಮಾನ ಹಾರಾಟ ಕಾರ್ಯಾಚರಣೆ ಹಿನ್ನೆಲೆ ಅಗತ್ಯ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ವಿಮಾನ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಅಧಿಕಾರಿ/ಸಿಬ್ಬಂದಿಯೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
![Preliminary meeting on Shivamogga Airport operations](https://etvbharatimages.akamaized.net/etvbharat/prod-images/15-07-2023/19007763_thumb.jpg)
ಆ.11ರಿಂದ ವಿಮಾನ ಹಾರಾಟ: 78 ಆಸನ ವ್ಯವಸ್ಥೆಯುಳ್ಳ ಎಟಿಆರ್-72 ಇಂಡಿಗೋ ವಿಮಾನ ಆ.11 ರಂದು ಕಾರ್ಯಾಚರಣೆ ನಡೆಸಲಿದೆ. ಅವರು ಅಬ್ಸರ್ವೇಷನ್ನಲ್ಲಿ ಕೇಳಿರುವ ಸೌಕರ್ಯಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚಿಸಿದರು.
ಇದನ್ನೂ ಓದಿ: ಆ.11ರಿಂದ ಶಿವಮೊಗ್ಗ ಏರ್ಪೋರ್ಟ್ನಿಂದ ವಿಮಾನ ಹಾರಾಟ : ಸಂಸದ ಬಿ ವೈ ರಾಘವೇಂದ್ರ
ಜತೆಗೆ ವಿಮಾನ ನಿಲ್ದಾಣದ ಅಧಿಕೃತ ವೆಬ್ಸೈಟ್ನ್ನು ಅಭಿವೃದ್ದಿಪಡಿಸಿ ಅಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಬೇಕು. ಗಣ್ಯರ ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಅಗತ್ಯವಾದ ವಾಹನಗಳ ಸೌಕರ್ಯ, ಕಾಫಿ-ತಿಂಡಿ ಮಳಿಗೆಗಳು, ಅಗತ್ಯ ಆ್ಯಂಬುಲೆನ್ಸ್ ಹಾಗೂ ಜಿಲ್ಲಾ ಪ್ರವಾಸೋದ್ಯಮಕ್ಕೆ ಒಂದು ಪ್ರತ್ಯೇಕ ಮಳಿಗೆ ಸಿದ್ದಪಡಿಸುವಂತೆ ತಿಳಿಸಿದರು. ವಿಮಾನದ ನಿಲ್ದಾಣದ ಸುತ್ತಮುತ್ತ ನಿಯಮಾನುಸಾರ ಬಫರ್ ಜೋನ್ ಅಧಿಸೂಚನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಜತೆಗೆ ಅಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಅಗತ್ಯವಾದ ಎಲ್ಲ ಅಂಶಗಳ ಕುರಿತು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 11ರಿಂದ ವಿಮಾನ ಹಾರಾಟ: ಎಂ.ಬಿ. ಪಾಟೀಲ
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ದೇಶಕ ಕ್ಯಾಪ್ಟನ್ ಶಮಂತ್ ಮಾತನಾಡಿ, ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ್ ಅವರು ಆ.11 ರ ಬೆಳಗ್ಗೆ 9.30 ಕ್ಕೆ ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಹೊರಟು ಬೆಳಗ್ಗೆ 11ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಬೆಳಗ್ಗೆ 11.20 ಕ್ಕೆ ವಿಮಾನ ಪ್ರಯಾಣಿಕರೊಂದಿಗೆ ಶಿವಮೊಗ್ಗದಿಂದ ನಿರ್ಗಮಿಸಿ, ಮಧ್ಯಾಹ್ನ 12.15 ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪುವ ಯೋಜನೆ ಇದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮೇಘನಾ ಆರ್, ಶಿವಮೊಗ್ಗ ಎಸಿ ರವಿಚಂದ್ರನ್ ನಾಯಕ್, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗಳೆ, ಪೊಲೀಸ್ ಪಡೆ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್, ಕೆಎಸ್‍ಐಐಡಿಸಿ ಅಧಿಕಾರಿಗಳು, ಇತರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಜರಿದ್ದರು.
ಇದನ್ನೂ ಓದಿ: Shivamogga Airport: ಆಗಸ್ಟ್‌ನಿಂದ ಮಲೆನಾಡಿನಲ್ಲಿ ಲೋಹದ ಹಕ್ಕಿ ಹಾರಾಟ ಸಾಧ್ಯತೆ?