ಶಿವಮೊಗ್ಗ: ಪರಿಸರ ವಿರೋಧಿಯಾದ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಸಾಗರ ನಗರಸಭೆ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಸಾಗರದ ಮಾರ್ಕೆಟ್ ರಸ್ತೆಯಲ್ಲಿ ಪಿಒಪಿ ಗಣಪತಿಗಳನ್ನು ಮಾರುತ್ತಿದ್ದ ಸ್ಥಳಕ್ಕೆ ನಗರಸಭೆಯ ಆರೋಗ್ಯಾಧಿಕಾರಿ ಪ್ರಭಾಕರ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಪಿಒಪಿ ಗಣೇಶ ಮೂರ್ತಿಗಳು ಪತ್ತೆಯಾಗಿದ್ದು, ಇವುಗಳು ಪರಿಸರಕ್ಕೆ ಮಾರಕವಾಗಿವೆ. ಇವುಗಳನ್ನು ನೀರಿನಲ್ಲಿ ಬಿಟ್ಟಾಗ ಬೇಗ ಕರಗುವುದಿಲ್ಲ. ಇದಕ್ಕೆ ಬಳಸಿರುವ ರಾಸಾಯನಿಕಗಳು ಜಲಚರಗಳಿಗೆ ಮಾರಕವಾಗಿವೆ. ಹಾಗಾಗಿ ಮಾರಾಟಗಾರರಿಗೆ ತಿಳುವಳಿಕೆಯ ಜೊತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಪಿಒಪಿ ಗಣಪತಿಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸುವಂತೆ ಸಾರ್ವಜನಿಕರಲ್ಲಿ ನಗರಸಭೆ ಮನವಿ ಮಾಡಿದೆ.