ಶಿವಮೊಗ್ಗ: ಹಳೆ ಶಿವಮೊಗ್ಗ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಈ ಭಾಗದ 7 ವಾರ್ಡ್ ಗಳನ್ನು ಇಂದಿನಿಂದ ಜುಲೈ 30ರ ತನಕ ಸೀಲ್ ಡೌನ್ ಮಾಡಲಾಗುವುದು. ಉಳಿದಂತೆ ಜಿಲ್ಲೆಯಲ್ಲಿ ಯಾವುದೇ ಲಾಕ್ ಡೌನ್ ಇಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಹಳೆ ಬಡಾವಣೆಗಳ ವಾರ್ಡ್ ಗಳಾದ 12, 13, 33, 22, 23, 29 ಹಾಗೂ 30ರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿದೆ. ಇಲ್ಲಿ 156 ಕಂಟೇನ್ಮೆಂಟ್ ಝೋನ್ ಗಳಿದ್ದು, ಇಲ್ಲಿ ಒಟ್ಟು 270 ಕೇಸ್ ಗಳು ಇವೆ ಎಂದು ಮಾಹಿತಿ ನೀಡಿದರು.
ಇನ್ನುಳಿದಂತೆ ನಗರದ 27 ಕಡೆ ಕಂಟೇನ್ಮೆಂಟ್ ಝೋನ್ಗಳಿದ್ದು, ಇಲ್ಲಿ 80 ಪ್ರಕರಣಗಳಿವೆ. 12, 12, 33ನೇ ವಾರ್ಡ್ ಅಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗುವುದು. ಉಳಿದಂತೆ 22, 32, 29 ಹಾಗೂ 30ನೇ ವಾರ್ಡ್ ಅಲ್ಲಿ ಭಾಗಶಃ ಸೀಲ್ ಡೌನ್ ಇರಲಿದೆ. ಎಲ್ಲಾ 7 ವಾರ್ಡ್ ಗಳಲ್ಲಿ ಬೆಳಗ್ಗೆ 5 ರಿಂದ 10 ರ ತನಕ ಮಾತ್ರ ಮನೆಯಿಂದ ಹೊರ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ನಂತರ ಮನೆಯಿಂದ ಯಾರು ಹೊರ ಬರುವಂತಿಲ್ಲ ಎಂದು ಇದೇ ವೇಳೆ ಸಚಿವರು ಹೇಳಿದರು.
ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ನಿಂದ ಪರೀಕ್ಷೆ:
ಸೀಲ್ ಡೌನ್ ಮಾಡಲಿರುವ 7 ವಾರ್ಡ್ ಗಳಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ಗಳ ಮೂಲಕ ಮನೆಮನೆಗೆ ಭೇಟಿ ನೀಡಿ ಪರೀಕ್ಷೆ ನಡೆಸಲಾಗುವುದು. ಈ ಕಿಟ್ ನಿಂದ ಪರೀಕ್ಷೆ ನಡೆಸಿದ ಮರುಕ್ಷಣವೇ ವರದಿ ಬರುತ್ತದೆ. ಇದರಿಂದ ಚಿಕಿತ್ಸೆ ನೀಡುವುದು ಸುಲಭವಾಗಲಿದೆ. ನಂತರ, ಜುಲೈ 29 ರವರೆಗೆ ಇಲ್ಲಿನ ಪರಿಸ್ಥಿತಿ ಗಮನಿಸಿ ನಂತರ ಸೀಲ್ ಡೌನ್ ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕೊರೊನಾ ವೈರಸ್ ನಿಂದ ದೂರವಿರಬೇಕು. ಯಾರೂ ಸಹ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬೇಡಿ. ನೀವೂ ಹೊರಗೆ ಬಂದು ಇತರರನ್ನು ಸಂಕಷ್ಟದಲ್ಲಿ ಸಿಲುಕಿಸಬೇಡಿ. ಎಲ್ಲರೂ ಸೀಲ್ ಡೌನ್ ಪಾಲಿಸಿ, ನಿಮ್ಮ ಹಾಗೂ ಕುಟುಂಬದ ಜೀವವನ್ನು ಉಳಿಸುವಲ್ಲಿ ನೆರವಾಗಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಈ ವೇಳೆ ಡಿಸಿ, ಎಸ್ಪಿ, ಎಡಿಸಿ ಜಿ. ಪಂ ಸಿಇಒ ಹಾಜರಿದ್ದರು.