ಶಿವಮೊಗ್ಗ : ಕೇಂದ್ರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲೆಯ ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆ ಅಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಹಾಗೂ ಸಹಾಯ ಧನದ ಚೆಕ್‍ನ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅನೇಕ ಸಮಸ್ಯೆ ಸವಾಲುಗಳ ಮಧ್ಯೆಯೂ ಬ್ಯಾಂಕಿನ ಸಿಬ್ಬಂದಿ ಸೇವೆ ನಿರಂತರವಾಗಿದೆ ಎಂದರು.
ತ್ವರಿತಗತಿಯಲ್ಲಿ ಸೇವೆಯನ್ನು ಸಲ್ಲಿಸುವ ಸದುದ್ದೇಶದಿಂದ ರಾಷ್ಟ್ರೀಯ ಬ್ಯಾಂಕ್ಗಳನ್ನು ವಿಲೀನ ಮಾಡಿ, ಅನವಶ್ಯಕ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನ್‍ಧನ್ ಯೋಜನೆಯಡಿ ಈಗಾಗಲೇ 1.80 ಲಕ್ಷ ಖಾತೆಗಳು ಆರಂಭವಾಗಿವೆ. ಜಿರೋ ಬ್ಯಾಲೆನ್ಸ್ ಹೊಂದಿರುವ ಖಾತೆದಾರರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಅಂದ್ರೆ 5, 10 ಅಥವಾ 20 ಸಾವಿರ ರೂ.ಗಳ ಸಾಲದ ಮೊತ್ತ ದೊರೆಯಲಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಸಹಾಯಧನ ಸೌಲಭ್ಯ ವಿತರಿಸಲಾಗಿದೆ.
ಖಾತೆ ಆರಂಭಿಸಿದ ಫಲಾನುಭವಿಗಳು ಕಾಲಕಾಲಕ್ಕೆ ಖಾತೆ ನವೀಕರಿಸಿಕೊಳ್ಳಬೇಕು. ಸಾಲಸೌಲಭ್ಯ ಪಡೆದ ಫಲಾನುಭವಿಗಳು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಸರ್ಕಾರದ ಯೋಜನೆಗಳು ಸಫಲಗೊಳ್ಳುವಲ್ಲಿ ಸಹಕರಿಸಬೇಕು. ಇದರಿಂದಾಗಿ ಯೋಜನೆಗಳು ಮುಂದುವರೆದು ಇತರರಿಗೆ ಪ್ರಯೋಜನ ಲಭಿಸಲಿದೆ ಎಂದು ಹೇಳಿದರು.