ಶಿವಮೊಗ್ಗ: ಸೊರಬದ ಸರ್ವೆ ನಂಬರ್ 113 ರ 400 ಎಕರೆ ಭೂಮಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಇದು ಹಿಂದಿನ ಶಾಸಕರ ಅವಧಿಯಲ್ಲಿ ನಡೆದ ಅಕ್ರಮವಾಗಿದೆ ಎಂದು ಆರೋಪಿಸಿರುವ ಶಾಸಕ ಕುಮಾರ ಬಂಗಾರಪ್ಪ, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ವೆ ನಂಬರ್,113 ರಲ್ಲಿ 400 ಎಕರೆಯನ್ನು ಪಟ್ಟಣದ ಅಭಿವೃದ್ಧಿಗೆ ಜಾಗವನ್ನು ನಿಗದಿ ಮಾಡಲಾಗಿತ್ತು. ಆದರೆ ಕಳೆದ ಅವಧಿಯಲ್ಲಿ ಸಾಕಷ್ಟು ಅಕ್ರಮ ನಡೆದು ಭೂಮಿಯನ್ನು ಕಬಳಿಸಿಕೊಂಡಿದ್ದಾರೆ. ಸಾಕಷ್ಟು ಅಕ್ರಮ ನಡೆಸಿ, ಹಕ್ಕುಪತ್ರಗಳನ್ನು ನೀಡಲಾಗಿದೆ. ಹಿಂದಿನ ತಹಶೀಲ್ದಾರ್ ಅವರು ಖಾಲಿ ಪೇಪರ್ಗೆ ಸಹಿ ಯಾಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಈ ಅಕ್ರಮದಲ್ಲಿ ಕೇವಲ ಅಧಿಕಾರಿಗಳ ಮೇಲಷ್ಟೆ ಅಲ್ಲದೆ, ರಾಜಕಾರಣಿಗಳ ವಿರುದ್ಧವೂ ಪ್ರಕರಣ ದಾಖಲಿಸಬಹುದಾಗಿದೆ ಎಂದರು.
ತಹಶೀಲ್ದಾರ್ ಕಾನೂನು ಪ್ರಕಾರ ಹಕ್ಕುಪತ್ರ ನೀಡಬೇಕಿತ್ತು. ಅಧಿಕಾರಿಗಳು ಸರ್ಕಾರಿ ದಾಖಲೆಗಳನ್ನೇ ಕಿತ್ತು ಹಾಕಿದ್ದಾರೆ. 94 ಸಿ ಹಾಗೂ 94 ಸಿ ಸಿ ನಲ್ಲಿ ಯಾರು ಅರ್ಜಿ ಹಾಕಿದ್ದಾರೆ ಎಂಬುದನ್ನು ವಂಶ ವೃಕ್ಷವನ್ನಿಟ್ಟು ನೋಡಬೇಕು. ಈಗ ಪಟ್ಟಣದ ಅಭಿವೃದ್ಧಿಗೆ ಆಸ್ಪತ್ರೆ, ಸಂತೆ ಮೈದಾನ ಹಾಗೂ ದೇವರಾಜ ಅರಸ್ ಭವನ ನಿರ್ಮಾಣಕ್ಕೆ ಜಾಗ ಇಲ್ಲದಂತೆ ಆಗಿದೆ. ಇದೆಲ್ಲಾ ಹಿಂದಿನ ಶಾಸಕರ ಅವಧಿಯಲ್ಲಿ ನಡೆದ ಅಕ್ರಮವಾಗಿದೆ ಎಂದು ತಮ್ಮ ಸಹೋದರ ಮಧು ಬಂಗಾರಪ್ಪನವರ ಹೆಸರು ಹೇಳದೆ ಹರಿಹಾಯ್ದರು.
ಎಲ್ಲಾ ಪಕ್ಷದಲ್ಲೂ ಬಂಡಾಯ ಸಹಜ:
ಮಂತ್ರಿಗಳಾಗಬೇಕು ಎನ್ನುವುದು ಎಲ್ಲಾರಿಗೂ ಆಸೆ ಇರುತ್ತದೆ. ಅದೇ ರೀತಿ ಅಸಮಾಧಾನ ಸಹ ಇರುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ಕಡೆ ನೋಡುವಂತದ್ದೇ. ನಮ್ಮ ಪಕ್ಷದ ಮುಖಂಡರುಗಳು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ. ಎಲ್ಲಾದಕ್ಕೂ ಒಂದು ಅಂತ್ಯ ಇರುತ್ತದೆ. ನಾನು ಯಾವತ್ತೂ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿಲ್ಲ ಎಂದು ಕುಮಾರ ಬಂಗಾರಪ್ಪ ಸ್ಪಷ್ಟಪಡಿಸಿದರು.